ಮಂಗಳೂರು: ಕೊಲೆ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಿದ್ದ ಆರೋಪಿಯೊಬ್ಬ ಪೊಲೀಸರ ವಶದಿಂದ (ಕಸ್ಟಡಿಯಿಂದ) ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಹಾಗೂ ತ್ವರಿತ ಕಾರ್ಯಾಚರಣೆ ನಡೆಸಿ ಆತನನ್ನು ಮತ್ತೆ ಬಂಧಿಸಿರುವ ಘಟನೆ ವರದಿಯಾಗಿದೆ.
ಘಟನೆಯ ಹಿನ್ನೆಲೆ:
ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರ ಆಗಸ್ಟ್ 11ರಂದು ನಡೆದಿದ್ದ ಬಟ್ಟೆ ವ್ಯಾಪಾರಿ ಸುದರ್ಶನ್ ಜೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿದ್ದಕಟ್ಟೆ ನಿವಾಸಿ ಪ್ರಸಾದ್ (ಎ-1) ಸೇರಿದಂತೆ ಪ್ರಮುಖ ಆರೋಪಿಗಳು ವಿಚಾರಣೆಗಾಗಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಹಿಂದೆ ವಿಚಾರಣಾ ದಿನದಂದು ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿ ಪ್ರಸಾದ್ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.
ಆರೋಪಿಯ ಪರವಾಗಿ ಯಾವುದೇ ವಕೀಲರು ಇಲ್ಲದ ಕಾರಣ, ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪಿಸಿ ವಿನಾಯಕ ಸಂಶಿ ಹಾಗೂ ಮೂಡುಬಿದ್ರೆ ಪೊಲೀಸ್ ಠಾಣೆಯ ಪಿಸಿ ಅಶೋಕ್ ಎಸ್.ಟಿ. ಅವರ ವಶದಲ್ಲಿದ್ದ ಆರೋಪಿಯನ್ನು ರಿಮಾಂಡ್ ವಾರಂಟ್‌ನೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು.
ಪೊಲೀಸರ ಕಣ್ಣು ತಪ್ಪಿಸಿ ಪರಾರಿ: ಮಂಗಳೂರಿನ ನ್ಯಾಯಾಲಯದ ಸಂಕೀರ್ಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬಳಿ ಬರುತ್ತಿದ್ದಂತೆ, ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ ಆರೋಪಿ ಪ್ರಸಾದ್, ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದನು. ಈ ಸಂಬಂಧ ಮಂಗಳೂರು ಬಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.
ಕೊನೆಗೂ ಸಿಕ್ಕಿಬಿದ್ದ ಆರೋಪಿ: ಪೊಲೀಸರ ವಶದಿಂದ ತಪ್ಪಿಸಿಕೊಂಡು ಮನೆಯನ್ನು ಸೇರಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಎಚ್ಚತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮತ್ತೆ ಬಂಧಿಸುವಲ್ಲಿ ಯಾಗಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆತನನ್ನು ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಈಗ ಮತ್ತೆ ಕಾನೂನಿನ ಕೈಗೆ ಒಪ್ಪಿಸಲಾಗಿದೆ




