ಸುರತ್ಕಲ್: ಇಲ್ಲಿನ ಎನ್ ಐಟಿಕೆ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯರಾತ್ರಿ 2.30ರ ಸುಮಾರಿಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಸಂಚರಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಟೋಲ್ ಗೇಟ್ ನ ಕಂಬವೊಂದು ಬುಡ ಸಮೇತ ಕಿತ್ತು ಬಂದಿದ್ದು, ಘಟನೆಯಿಂದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ಸಂಬಂಧಿಸಿ ಹೇಳಿಕೆ ನೀಡಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ಕತ್ತಲಲ್ಲಿ ದಿಢೀರ್ ಎದುರಾಗುವ ಅಪಘಾತದ ಸ್ಪಾಟ್ ಆಗಿ ಬದಲಾಗಿದೆ.
ಹೆದ್ದಾರಿ ನಡುವಿನ ಟೋಲ್ ಗೇಟ್ ಪಳೆಯುಳಿಕೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕಂಬಗಳು ಜಾರಿ ಕುಸಿಯುವ ಭೀತಿಯಲ್ಲಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯ, ಕರ್ತವ್ಯಲೋಪದಿಂದ ವಾಹನ ಸವಾರರ ಪಾಲಿಗೆ ಈ ನಿರುಪಯುಕ್ತ ಟೋಲ್ ಗೇಟ್ ಮಾರಣಾಂತಿಕವಾಗುತ್ತಿದೆ ಎಂದು ದೂರಿದ್ದಾರೆ.