ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬಹುಚರ್ಚಿತ ಕೊಲೆ ಯತ್ನ ಪ್ರಕರಣವೊಂದರಲ್ಲಿ, ಆರೋಪಿಯನ್ನು ಮಾನ್ಯ 2ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2018ರಂತೆ ಭಾರತೀಯ ದಂಡ ಸಂಹಿತೆ (IPC) ಕಲಂ 341, 323, 324, 504, 506 ಹಾಗೂ 307ರ ಅಡಿಯಲ್ಲಿ ಪ್ರಶಾಂತ್ ಭಂಡಾರಿ ಎಂಬವರ ಮೇಲೆ ದಾಖಲಾಗಿದ್ದ ಈ ಪ್ರಕರಣದಲ್ಲಿ, ಎಸ್ಸಿ ಸಂಖ್ಯೆ 108/21ರಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಆರೋಪಿ ಪರವಾಗಿ ಹೈಕೋರ್ಟ್/ವಿಶೇಷ ವಕೀಲರಾದ ಶಿವಾನಂದ ಎಂ. ವಕ್ತೀರಿ ವಿಟ್ಲ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ ಮತ್ತು ವಿವರ:
ದೂರುದಾರರಾದ ಗಂಗಾಧರ ಪೂಜಾರಿ ಎಂಬವರು ನೀಡಿದ ದೂರಿನನ್ವಯ, 2018ರ ಮಾರ್ಚ್ 10ರಂದು ರಾತ್ರಿ ಸುಮಾರು 7:45 ಗಂಟೆಯ ವೇಳೆಗೆ ತಮ್ಮ ಮನೆಯಿಂದ ಬೊಂದೇಲ್ ಕಡೆಗೆ ತೆರಳುತ್ತಿದ್ದರು. ಅವರು 5ನೇ ಬ್ಲಾಕ್ನಿಂದ 9ನೇ ಬ್ಲಾಕ್ಗೆ ಹೋಗುವ ಒಳರಸ್ತೆಗೆ ತಲುಪಿದಾಗ, ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಪ್ರಶಾಂತ್ ಭಂಡಾರಿ ದಾರಿ ತಡೆದು ನಿಲ್ಲಿಸಿದ್ದನು.
ನಂತರ ಅಸಭ್ಯಯೆಯಿಂದ ಅವಾಚ್ಯ ಶಬ್ದಗಳಿಂದ ಬೈದು, ತಾನು ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಗಂಗಾಧರ ಪೂಜಾರಿ ಅವರ ಬಲಗೈ ತೋಳು, ಬಲ ಭುಜ, ಎಡ ಕಿಬ್ಬೊಟ್ಟೆ, ಬೆನ್ನಿನ ಮಧ್ಯಭಾಗ ಹಾಗೂ ಬೆನ್ನಿನ ಎಡ ಬದಿಗೆ ತಿವಿದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇವರ ನಡುವೆ ನಡೆದಿದ್ದ ಹಿಂದಿನ ಗಲಾಟೆಯೇ ಈ ಹಲ್ಲೆಗೆ ಕಾರಣ ಎಂದು ದೂರುದಾರರು ಆರೋಪಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿಯಾದ ಗೋಪಾಲ್ ಜೋಗಲೇಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು:
ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಒಟ್ಟು 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ವಿಚಾರಣೆಯ ಸಮಯದಲ್ಲಿ ಆರೋಪಿಯ ಮೇಲಿನ ಕೃತ್ಯವು ಸಾಕ್ಷ್ಯಾಧಾರಗಳ ಕೊರತೆಯಿಂದ ದೃಢಪಡದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಲಯವು ಆರೋಪಿ ಪ್ರಶಾಂತ್ ಪೂಜಾರಿಯನ್ನು ದೋಷ ಮುಕ್ತ ಮಾಡಲಾಗಿದೆ




