ಮಂಗಳೂರು: ನಗರದ ಕೋಡಿಕ್ಕಲ್‌ನಲ್ಲಿ ಮನೆಯ ಎದುರು ನಿಲ್ಲಿಸಿದ್ದ ಹೊಂಡಾ ಡಿಯೋ ಸ್ಕೂಟರ್ ಕಳವು ಮಾಡಿದ್ದ ಆರೋಪಿಯನ್ನು ಉರ್ವಾ ಪೊಲೀಸರು ಬಂಧಿಸಿ, ಕಳವಾಗಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲದ ಕೋಡಿ ನಿವಾಸಿ ಮಹಮ್ಮದ್ ಫೈಜಲ್ ಅಲಿಯಾಸ್ ತೋಟ ಫೈಜಲ್ (40) ಎಂದು ಗುರುತಿಸಲಾಗಿದೆ.
ಕೋಡಿಕ್ಕಲ್‌ನಲ್ಲಿ ಮನೆಯೊಂದರ ಎದುರು ಪಾರ್ಕ್ ಮಾಡಲಾಗಿದ್ದ KA-19-EB-2226 ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಜುಲೈ 24ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ವೇಳೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿಯ ಚಹರೆಯನ್ನು ಗುರುತಿಸಿದ್ದರು. ಬಳಿಕ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ಆರೋಪಿಯ ಜಾಡು ಪತ್ತೆಹಚ್ಚಿದ ಪೊಲೀಸರು, ಆಗಸ್ಟ್ 18ರಂದು ಆರೋಪಿಯನ್ನು ಬಂಧಿಸಿ ಕಳವಾಗಿದ್ದ ಸ್ಕೂಟರ್‌ನ್ನೂ ಪತ್ತೆಹಚ್ಚಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಯ ವಿರುದ್ಧ ಕರ್ನಾಟಕ ಹಾಗೂ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ, ಕೊಣಾಜೆ, ಉಳ್ಳಾಲ, ಮೂಡಬಿದಿರೆ, ಬಂಟ್ವಾಳ ಗ್ರಾಮಾಂತರ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಸ್ತುತ ದಸ್ತಗಿರಿ ವಾರೆಂಟ್‌ಗಳು ಇರುವುದಾಗಿ ತಿಳಿದುಬಂದಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಉರ್ವಾ ಪೊಲೀಸರು ಮುಂದುವರಿಸಿದ್ದಾರೆ.




