ಚೆನ್ನೈ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಅಪರಾಧಿಗೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಧರ್ಮ ಮುನೀಶ್ವರನ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಅಪರಾಧಿಯು ಕೃತ್ಯ ಎಸಗಿದ 77 ದಿನಗಳಲ್ಲೇ ಆತನಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಲೈಂಗಿಕ ದೌರ್ಜನ್ಯ ಹಾಗೂ ಕೊಲೆ, ಎರಡೂ ಪ್ರಕರಣದಲ್ಲೂ ಆತ ಅಪರಾಧಿ ಎಂದು ಸಾಬೀತಾಗಿದ್ದು, ಪ್ರತ್ಯೇಕವಾಗಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ವಿಲಾತಿಕುಲಂನ 12 ನೇ ತರಗತಿಯ ೧೭ ವರ್ಷದ ವಿದ್ಯಾರ್ಥಿನಿ ಈ ವರ್ಷ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಳು. ಆಕೆಯ ಶವ ಮನೆಯ ಸಮೀಪವಿರುವ ಕುರುಚಲು ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಅಪರಾಧಿಯನ್ನು ಪತ್ತೆ ಹಚ್ಚಲು ಪೊಲೀಸರು ಅಪರಾಧ ನಡೆದ ಸ್ಥಳದ ಬಳಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, 10 ವಿಶೇಷ ತಂಡಗಳು ಇತರ ಸ್ಥಳಗಳಲ್ಲಿ 98 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.
ಟವರ್ ಡಂಪ್ ವಿಧಾನವನ್ನು ಬಳಸಿಕೊಂಡು 2,574 ಫೋನ್ ಸಂಖ್ಯೆಗಳನ್ನು ಪರಿಶೀಲಿಸಲಾಗಿತ್ತು. ಅಪರಾಧ ನಡೆದ ಸ್ಥಳದ ಬಳಿ ಅನುಮಾನಾಸ್ಪದ ದ್ವಿಚಕ್ರ ವಾಹನದ ಫೋಟೋ ವಿಂಡ್‌ಮಿಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ವೇಳೆ ಆ ಬೈಕ್‌ನ ನೋಂದಣಿ ಸಂಖ್ಯೆ ತಿರುಚಲಾಗಿದ್ದು, ಬೈಕ್ ಕದ್ದಿರುವುದು ಬೆಳಕಿಗೆ ಬಂದಿತ್ತು. ಇದೇ ಆಧಾರದ ಮೇಲೆ ಅಪರಾಧಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.




