ಮಂಗಳೂರು : ನಗರದ ದೆರೆಬೈಲ್ ಗ್ರಾಮದ ಕೊಂಚಾಡಿ ಜಂಕ್ಷನ್‌ನಲ್ಲಿ ಕರ್ತವ್ಯ ನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಮೇಲೆ ಮೂವರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು, ತಳ್ಳಾಡಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿಯ ಎಡಗೈನ ಮಣಿಗಂಟು ಮುರಿತಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಪ್ರಸಾದ್, ಉದಯ ಮತ್ತು ಪ್ರಶಾಂತ್ ಎಂಬ ಮೂವರು ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಮೇ 17 ರಂದು ರಾತ್ರಿ ಕೊಂಚಾಡಿ ಜಂಕ್ಷನ್‌ನಲ್ಲಿರುವ ಬಾರ್ ಮತ್ತು ರೆಸ್ಟೊರೆಂಟ್‌ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಹೊಯ್ಸಳ ನಿಯಂತ್ರಣ ಕೊಠಡಿಗೆ ದೂರು ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಸಿಪಿಸಿ ಅಪ್ಪಣ್ಣ ಶೇಡಬಾಳ ಹಾಗೂ ಎಹೆಚ್‌ಸಿ ಭೀಮಾಶಂಕರ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಬಾರ್‌ನಿಂದ ಹೊರಬಂದಿದ್ದ ಮೂವರು ಆರೋಪಿಗಳನ್ನು ಸೆಕ್ಯೂರಿಟಿ ಸಿಬ್ಬಂದಿ ಗುರುತಿಸಿಕೊಟ್ಟಿದ್ದಾರೆ. ಪೊಲೀಸರು ಅವರನ್ನು ವಿಚಾರಿಸಲು ಹೋದಾಗ ಉಡಾಫೆ ಉತ್ತರ ನೀಡಿದ್ದಾರೆ.




