ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟನ್ನು ಸಮುದ್ರದ ಮಧ್ಯೆ ಮೀನುಗಾರರ ಸಹಿತ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಡಿಸೇಲ್ ಲೂಟಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಭಟ್ಕಳದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಟ್ಕಳದ ಸುಬ್ರಹ್ಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್ ನಾರಾಯಣ ಖಾರ್ವಿ (40), ನಾಗೇಶ್ ನಾರಾಯಣ (42), ಬಂದರು ಸಮೀಪದ ಬೆಳ್ಳಿಯ ಗೋಪಾಲ ಮಾದವ್ (38), ಭಟ್ಕಳದ ಸಂತೋಷ ದೇವಯ್ಯ (43) ಹಾಗೂ ಲಕ್ಷ್ಮಣ್ (50) ಎಂದು ಗುರುತಿಸಲಾಗಿದೆ. ಮಲ್ಪೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಭಟ್ಕಳಕ್ಕೆ ತೆರಳಿದ್ದ ಮಲ್ಪೆ ಪೊಲೀಸರು, ಅಪಹರಿಸಲ್ಪಟ್ಟ ಬೋಟು ಮತ್ತು ಮೀನುಗಾರರನ್ನು ಪತ್ತೆ ಹಚ್ಚಿದ್ದು, ಇದೀಗ ಏಳು ಮಂದಿ ಆರೋಪಿಗಳನ್ನು ಬಂಧಿಸಿ ಮಲ್ಪೆಗೆ ಕರೆ ತಂದಿದ್ದಾರೆ.
Author: main-admin
ಮಂಗಳೂರಿನಲ್ಲಿ ನಡೆದ ಬಸ್ಸು ಮತ್ತು ಬೈಕ್ ಅಪಘಾತದಲ್ಲಿ ಚಾರ್ಮಾಡಿಯ ಯುವಕ ಸಾವನ್ನಪ್ಪಿದ ಘಟನೆ ಮಾ.1 ರಂದು ರಾತ್ರಿ ಮಂಗಳೂರಿನ ಕಂಕನಾಡಿ ಸಮೀಪ ನಡೆದಿದೆ. ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ ಸಿನಾನ್ (21 ವರ್ಷ) ಮೃತಪಟ್ಟ ದುರ್ದೈವಿ. ಬಡಕುಟುಂಬದ ಸಿನಾನ್ ಪಾರ್ಟ್ ಟೈಮ್ ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅವರು, ವಿದ್ಯಾಭ್ಯಾಸವನ್ನು ತನ್ನ ಖರ್ಚಿನಿಂದಲೇ ನಿಭಾಯಿಸುತ್ತಿದ್ದರು. ಇದೇ ರೀತಿ ನಿನ್ನೆ ರಾತ್ರಿ ವೇಳೆ ಫುಡ್ ಡೆಲಿವರಿ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಖಾಸಗಿ ಬಸ್ಸೊಂದು ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿನ ಹ್ಯಾಂಡ್ಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಬಸ್ಸಿನಡಿಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ. ಮಂಗಳೂರಿನ ಯೇನಪೋಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದರು.ಮೃತರು ತಂದೆ,ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೈಟ್ಫೀಲ್ಡ್ ಪ್ರದೇಶದ ಕೆಫೆ ಕಾಂಪೌಂಡ್ ಒಳಗೆ ವ್ಯಕ್ತಿಯೊಬ್ಬ ಚೀಲವನ್ನು ಹೊತ್ತೊಯ್ಯುತ್ತಿರುವುದನ್ನು ತುಣುಕು ತೋರಿಸುತ್ತದೆ. ಶಂಕಿತನು ಚೀಲವನ್ನು ಕೆಫೆಯಲ್ಲಿ ಇರಿಸಿ ಅದು ಸ್ಫೋಟಗೊಳ್ಳುವ ಮೊದಲು ಹೊರಟುಹೋದನು ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತನೊಂದಿಗೆ ಕಾಣಿಸಿಕೊಂಡ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತನ ಮುಖವನ್ನು ಮುಖವಾಡ, ಕನ್ನಡಕ ಮತ್ತು ಟೋಪಿಯಿಂದ ಮುಚ್ಚಲಾಗಿತ್ತು. ಕೆಫೆಯೊಳಗೆ ಅಳವಡಿಸಲಾದ ಕ್ಯಾಮೆರಾಗಳು ಇಡ್ಲಿ ಪ್ಲೇಟ್ ಗಳನ್ನು ಸಾಗಿಸುತ್ತಿರುವುದು ಸೆರೆಯಾಗಿದೆ. ಶುಕ್ರವಾರ ಮಧ್ಯಾಹ್ನ 12.50 ರಿಂದ 1 ಗಂಟೆಯ ನಡುವೆ ಸ್ಫೋಟ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದಾರೆ.
ಸುಳ್ಯ: ಬೈಕ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕರೊಬ್ಬರು ಸಾವನಪ್ಪಿದ ಘಟನೆ ಪಾಲಡ್ಕ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಪದ್ಮನಾಭ ಎಂದು ಗುರುತಿಸಲಾಗಿದ್ದು, ಅವರು ಶಿಕ್ಷಕರಾಗಿದ್ದರು. ಪದ್ಮನಾಭ ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಗೇರುಕಟ್ಟೆಯಲ್ಲಿ ಬಂಧಿಸಿದ್ದಾರೆ ಆರೋಪಿಗಳನ್ನು ಗೇರುಕಟ್ಟೆ ನಿವಾಸಿ ಉಮರ್ ಫಾರೂಕ್ ಹಾಗೂ ಮುಂಡಾಜೆ ಸೋಮಂತಡ್ಕ ನಿವಾಸಿ ಸತೀಶ್ ಯಾನೆ ಸ್ಥಾರ್ಪಿಯೋ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗೇರುಕಟ್ಟೆ ಸಮೀಪದ ಓಡುರೊಟ್ಟು ಎಂಬಲ್ಲಿ ಸ್ಕೂಟರ್ ನೊಂದಿಗೆ ಅನುಮಾನಾಸ್ಪದವಾಗಿ ನಿಂತಿರುವುದನ್ನು ನೋಡಿದ ಬೆಳ್ತಂಗಡಿ ಪಿಎಸ್ಸೆ ಚಂದ್ರಶೇಖರ್ ಹಾಗೂ ತಂಡ ತಡೆದು ವಿಚಾರಣೆ ನಡೆಸಿ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿಯಿಂದ 2.65 ಕೆ.ಜಿ. ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಂಡಿರುವ ಗಾಂಜಾದ ಒಟ್ಟು ಮೌಲ್ಯ 51,000 ರೂ. ಎಂದು ಅಂದಾಜಿಸಲಾಗಿದೆ. ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು, ಗಾಂಜಾ ಸಾಗಾಟಕ್ಕೆ ಬಳಸಿದ ಸ್ಕೂಟರ್‌ನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಕಾಪು ಪೊಲಿಪು ನಿವಾಸಿ ಕಿಶೋರ್ (29) ಎಂದು ಗುರುತಿಸಲಾಗಿದೆ. ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಕಯಾಕ್ ಹಾಗು ಮೃತದೇಹವನ್ನು ತಂದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ವಿಜಯ್ ಕರ್ಕೇರ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಸ್ಥಳೀಯರಾದ ಶಿವಾಜಿ ಸುವರ್ಣ, ಬಾಲಕೃಷ್ಣ ಹಾಗೂ ಕಾಪು ಪೊಲೀಸರು ಭೇಟಿ ನೀಡಿದ್ದಾರೆ.
ಉಳ್ಳಾಲ: ಧಾರುಣ ಘಟನೆಯೊಂದರಲ್ಲಿ ಹೃದಯಾಘಾತದಿಂದ ಪತ್ನಿ ನಿಧನರಾದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೂಡ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆಯ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ.ಮೃತರನ್ನು ಗ್ರಾಮ ಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಮತ್ತು ಅವರ ಪತಿ ಶೇಷಪ್ಪ ಪೂಜಾರಿ(63) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮೀನಾಕ್ಷಿ ಅವರ ಸ್ಥಿತಿ ಗಂಭಿರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಮರುದಿನ ಸಂಜೆ ಶೇಷಪ್ಪ ಆವರು ಮನೆಗೆ ಆಗಮಿಸಿದ್ದ ಸಂದರ್ಭ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿದ್ದರು. ಸಂಬಂಧಿಕರು ಪಕ್ಕದ ಅಂಗಡಿಗೆ ತೆರಳಿ ವಾಪಾಸಾದಾಗ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದು, ಪಕ್ಕದ ಅಂಗಡಿಯವರು ಮತ್ತು ಸಂಬಂಧಿಕರು ಕೀಟನಾಶಕವನ್ನು ಎಳೆದು ತೆಗೆದರೂ ಅದಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಮೀನಾಕ್ಷಿ ತನ್ನ…
ಉಳ್ಳಾಲ : ನೇಣು ಬಿಗಿದು ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬವು ಮನೆ ಪುನರ್ ನಿರ್ಮಾಣದ ಹಿನ್ನೆಲೆಯಲ್ಲಿ ಲಕ್ಷ್ಮೀಗುಡ್ಡೆಯಲ್ಲಿ ನೆಲೆಸಿತ್ತು. ಧನರಾಜ್ ತಂದೆ ರಿಕ್ಷಾ ಚಾಲಕ ಲಿಂಗಪ್ಪ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ಧನರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು , ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಧನರಾಜ್ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಕುಂಪಲ ಲಕ್ಷ್ಮೀಗುಡ್ಡೆಯಲ್ಲಿ ನಡೆದಿದೆ. ಧನರಾಜ್ ಪೂಜಾರಿ(32) ಆತ್ಮಹತ್ಯೆ ಮಾಡಿಕೊಂಡ ಯುವಕ. ಧನರಾಜ್ ಅವಿವಾಹಿತರಾಗಿದ್ದು, ದೇರಳಕಟ್ಟೆಯ ಯೇನಪೋಯ ಪಾರ್ಕ್ ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದರು. ಗುರುವಾರ ಸಂಜೆ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಂಗಳೂರು: ಮೊಬೈಲ್ ಕಳವುಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ಕೋರ್ಟ್ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. 2023ರ ಜೂನ್ 18ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜು ಅರಸು ಮೆಟ್ರಿಕ್ ಬಳಿಕದ ಬಾಲಕಿಯರ ವಸತಿ ನಿಲಯದ ಒಳಗೆ ಮಹೇಶ್ ಪೈ ಎಂಬಾತ ಪ್ರವೇಶಿಸಿ ವಿದ್ಯಾರ್ಥಿನಿಯರ 3 ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದ. ಈತನನ್ನು ದಸ್ತಗಿರಿ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜಪಡಿಸಿ, ದೋಷರೋಪಣಾ ಪಟ್ಟಿ ಸಲ್ಲಿಸಿತ್ತು. ವಾದ ವಿವಾದವನ್ನು ಆಲಿಸಿದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ಕೋರ್ಟ್ ಮಂಗಳೂರು ನ್ಯಾಯಾಲಯ ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ಆದೇಶಿಸಿದೆ.
ಕಡಬ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರದಲ್ಲಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ಗ್ರಾಮದ ಹೂವಪ್ಪ ಗೌಡರವರ ಪತ್ನಿ ವಸಂತಿ ಎಂ.(42ವ.)ಗಾಯಗೊಂಡವರು. ಇವರು ತನ್ನ ಮಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು, ಸುಬ್ರಹ್ಮಣ್ಯ ಬಿಲದ್ವಾರದ ಬಳಿ ಅವರು ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೇ ಬಸ್ ಚಲಾಯಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್ ಚಾಲಕ ಮಂಜುನಾಥರವರು ಬಸ್ ಚಲಾಯಿಸಿದ ಪರಿಣಾಮ ವಸಂತಿರವರು ಬಸ್‌ನಿಂದ ಕೆಳಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ವಸಂತಿ ಅವರನ್ನು ಚಿಕಿತ್ಸೆಗಾಗಿ ದೇರಳ ಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೂವಪ್ಪ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2024 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.