ಸುಳ್ಯ: ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಾಡಾನೆ ಓಡಿಸುವ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡು ಇಬ್ಬರಿಗೆ ತಗುಲಿದೆ. ಓರ್ವನಿಗೆ ಗಾಯವಾಗಿದ್ದು, ಮತ್ತೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಅರಣ್ಯ ಇಲಾಖೆ ಮತ್ತೆ ಎಡವಟ್ಟು ಮಾಡಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೆಂಗಮಲೆ ಎಂಬಲ್ಲಿ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮತ್ತೊಬ್ಬ ಸವಾರನ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ಗೆ ಗುಂಡು ತಗುಲಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುಮಾರು ನಾಲ್ಕೈದು ದಿನಗಳ ಹಿಂದೆ ಐವರ್ನಾಡು ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಸಿಬ್ಬಂದಿ ಹಾರಿಸಿದ ಗುಂಡು, ಅದೇ ಮಾರ್ಗವಾಗಿ ಬೈಕ್ನಲ್ಲಿ ತೆರಳುತ್ತಿದ್ದ ರಾಘವ ಪ್ರಭು ಎಂಬುವವರ ಕಾಲಿಗೆ ತಗುಲಿದೆ. ತಕ್ಷಣವೇ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಣ್ಯಾಧಿಕಾರಿಗಳೇ ಚಿಕಿತ್ಸಾ ವೆಚ್ಚವನ್ನು ಭರಿಸಿ ರಾಜಿ ಸಂಧಾನಕ್ಕೆ ಮುಂದಾಗಿದ್ದರಿಂದ ಅವರು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ ಎನ್ನಲಾಗಿದೆ.
ಜೀವ ಉಳಿಸಿದ ಮೊಬೈಲ್!
ಇದೇ ಘಟನೆಯಲ್ಲಿ ಮತ್ತೊಬ್ಬ ಸವಾರ ಧನರಾಜ್ ಎಂಬುವವರು ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಗುಂಡಿನ ಚೂರು ನೇರವಾಗಿ ಧನರಾಜ್ ಅವರ ಎದೆಯ ಭಾಗಕ್ಕೆ ನುಗುತ್ತಿತ್ತು, ಆದರೆ ಶರ್ಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ಗೆ ತಗುಲಿದೆ. ಇದರಿಂದ ಮೊಬೈಲ್ ಜಖಂಗೊಂಡಿದೆ. ಒಂದು ವೇಳೆ ಆ ಜಾಗದಲ್ಲಿ ಮೊಬೈಲ್ ಇಲ್ಲದಿದ್ದರೆ ಗುಂಡು ನೇರವಾಗಿ ಅವರ ಹೃದಯ ಭಾಗಕ್ಕೆ ತೂರಿ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಸದ್ಯ ಮೊಬೈಲ್ನಿಂದಾಗಿ ಜೀವ ಉಳಿದಿದ್ದು, ಅರಣ್ಯ ಇಲಾಖೆಯ ಈ ಅಜಾಗರೂಕತೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.




