ಮಂಗಳೂರು: ನಗರದ ವಿವಿಧ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ 11 ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದ ಬೆನ್ನಲ್ಲೇ, ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇವರನ್ನು ಕರೆತಂದಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ದಲ್ಲಾಳಿಗಳ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಿದ್ದಾರೆ.
ಅಂತರರಾಜ್ಯ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶಿ ಪ್ರಜೆಗಳನ್ನು ಇಲ್ಲಿನ ಸ್ಥಳೀಯ ಕೆಲಸಗಳಿಗೆ ಅಕ್ರಮವಾಗಿ ಸೇರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ, ರಸುಲ್ ಇಸ್ಲಾಂ ಮತ್ತು ದಿಲ್ವರ್ ಹುಸೇನ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, “ಆರೋಪಿಗಳ ಪೈಕಿ ಮೊಯ್ದಿನ್ ಇಸ್ಲಾಂ ಮತ್ತು ದಿಲ್ವರ್ ಹುಸೇನ್ ಎಂಬಿಬ್ಬರನ್ನು ಮಂಗಳೂರು ನಗರ ವ್ಯಾಪ್ತಿಯಲ್ಲೇ ಬಂಧಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಪ್ರಕರಣದ ಮೂರನೇ ಆರೋಪಿಗಾಗಿ ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಹೊರರಾಜ್ಯಕ್ಕೂ ಜಾಲ ಬೀಸಿದ್ದರು. ಪೊಲೀಸರು ಕೋಲ್ಕತ್ತಾ ಪೊಲೀಸರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ನಡೆಸಿದ ಜಂಟಿ ಕಾರ್ಯಾಚರಣೆಯ ಫಲವಾಗಿ, ಮೂರನೇ ಆರೋಪಿಯನ್ನು ಕೋಲ್ಕತ್ತಾದಲ್ಲಿ ವಶಕ್ಕೆ ಪಡೆಯಲಾಗಿದೆ. ಆತನನ್ನು ಮಂಗಳೂರಿಗೆ ಕರೆತರಲು ನಮ್ಮ ವಿಶೇಷ ಪೊಲೀಸ್ ತಂಡ ಈಗಾಗಲೇ ಕೋಲ್ಕತ್ತಾಗೆ ತೆರಳಿದೆ,” ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ಆರೋಪಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಒಟ್ಟುಗೂಡಿಸಿ ಮಂಗಳೂರಿನ ನಿರ್ಮಾಣ ವಲಯದ ಅಗತ್ಯಗಳಿಗೆ ತಕ್ಕಂತೆ ಸರಬರಾಜು ಮಾಡುವ ಜಾಲ ಹೊಂದಿದ್ದರು. ದೇಶದ ಒಳಗಿನ ವಲಸೆ ಕಾರ್ಮಿಕರನ್ನು ಕರೆತರುವ ನೆಪದಲ್ಲಿ, ಇವರು ಬಾಂಗ್ಲಾದೇಶದ ಗಡಿ ಭಾಗದಿಂದ (ವಿಶೇಷವಾಗಿ ಮುರ್ಷಿದಾಬಾದ್ ಮೂಲಕ) ಅಕ್ರಮವಾಗಿ ಜನರನ್ನು ಭಾರತದೊಳಗೆ ನುಸುಳಿಸಿ, ಮಂಗಳೂರಿನ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
“ಕೋಲ್ಕತ್ತಾದಲ್ಲಿ ಬಂಧಿತನಾಗಿರುವ ಮೂರನೇ ಆರೋಪಿಯನ್ನು ಮಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ, ಈ ಕಳ್ಳಸಾಗಣೆ ಜಾಲದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇದರಲ್ಲಿ ಬೇರೆ ಯಾವುದೇ ದಲ್ಲಾಳಿಗಳು ಅಥವಾ ಸ್ಥಳೀಯರ ಕೈವಾಡವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ,” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.




