ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಸುಸ್ಥಿತಿಯಲ್ಲಿರಬೇಕು ಮತ್ತು ಒಂದು ನಿಮಿಷವೂ ಆಫ್ ಆಗಬಾರದು ಎಂದು ಕರ್ನಾಟಕ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಕಿರುಕುಳ ಆರೋಪ ಪ್ರಕರಣದಲ್ಲಿ ಕಳೆದ 11 ತಿಂಗಳಿನಿಂದ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದಿದ್ದ ಪೊಲೀಸರ ಬೇಜವಾಬ್ದಾರಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಇದು ಇಲಾಖೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ ಎಂದಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಠಾಣೆಗಳ ಸಿಸಿಟಿವಿಯನ್ನು ಕಡ್ಡಾಯವಾಗಿ ಲೈವ್ ಟ್ರ್ಯಾಕ್ ಮಾಡಲು ನಿರ್ದೇಶಿಸಿದೆ.
ವೈಟ್‌ಫೀಲ್ಡ್ ಪೊಲೀಸರ ವಿರುದ್ಧದ ದೂರು ಮತ್ತು ತನಿಖೆ
ವೈಟ್‌ಫೀಲ್ಡ್ ಪೊಲೀಸ್ ಠಾಣೆ ಸಿಬ್ಬಂದಿಯಿಂದ ತಮಗೆ ಕಿರುಕುಳವಾಗಿದೆ ಎಂದು ಆರೋಪಿಸಿ ಶೈಲಜಾ ಎಂಬ ಮಹಿಳೆ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಈ ಪ್ರಕರಣದ ತನಿಖೆ ವೇಳೆ, ಕಳೆದ 11 ತಿಂಗಳಿನಿಂದ ಠಾಣೆಯಲ್ಲಿ ಯುಪಿಎಸ್ (UPS) ಸಮಸ್ಯೆ ಇದ್ದು, ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ಹೈಕೋರ್ಟ್, “ಪೊಲೀಸರ ಈ ಉತ್ತರ ಸಾರ್ವಜನಿಕರಲ್ಲಿ ಇಲಾಖೆಯ ಮೇಲಿರುವ ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸುಪ್ರೀಂ ಕೋರ್ಟ್ ಆದೇಶ ಕಡ್ಡಾಯ ಪಾಲನೆಗೆ ಸೂಚನೆ
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಅವು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ರಾಜ್ಯ ಉನ್ನತ ನ್ಯಾಯಾಲಯ ತಿಳಿಸಿದೆ. ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ರಿಯಲ್-ಟೈಮ್‌ನಲ್ಲಿ ರೆಕಾರ್ಡ್ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಡಿಜಿ-ಐಜಿಪಿ ಕಚೇರಿಯಿಂದಲೇ ಲೈವ್ ಮಾನಿಟರ್ ಮಾಡುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ನಿರ್ದೇಶಿಸಿದೆ.




