ಮಂಗಳೂರು: ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ BSNL ಇಲಾಖೆಗೆ ಸೇರಿದ ತಾಮ್ರದ ಕೇಬಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ 16-02-2026ರಂದು BSNL ಕಚೇರಿ, ಪಾಂಡೇಶ್ವರ, ಮಂಗಳೂರು ಇಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿರುವ ವಿನೋದ ಶೇಖರ್ ನಾಯಕ್ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಡಿಸೆಂಬರ್ 2025ರಿಂದ 14-02-2026ರವರೆಗೆ BSNL ಇಲಾಖೆಗೆ ಸೇರಿದ ತಾಮ್ರದ ಕೇಬಲ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಕಳುವಾದ ಕೇಬಲ್ಗಳ ಅಂದಾಜು ಮೌಲ್ಯ ಸುಮಾರು ₹70 ಲಕ್ಷ ಎಂದು ಹೇಳಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ಠಾಣಾ ಅ.ಕ್ರ.45/2026, ಕಲಂ 303(2) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು 18-02-2026ರಂದು ಕೆಳಕಂಡ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಕ್ಕೂರು ನಿವಾಸಿ ಮಂಜುನಾಥ ಡಿ (29) (ಕೇಬಲ್ ಜಾಯಿಂಟರ್, NFS ಕೇಬಲ್, L&T ಕಂಪನಿ, ಕದ್ರಿ ಮಂಗಳೂರು), ಕಣ್ಣೂರು ಮೂಲದ ಪ್ರಸ್ತುತ ಮಾರ್ನಮಿಕಟ್ಟೆ ನಿವಾಸಿ ಕೆ.ಕೆ. ಚಾಮಿ (59), ಖಾಯಂ (ಟೆಲಿಕಾಂ ಟೆಕ್ನಿಷಿಯನ್, BSNL ಕಚೇರಿ, ಪಾಂಡೇಶ್ವರ), ಹಾಸನ ಮೂಲದ ಪ್ರಸ್ತುತ ಪಂಪವೆಲ್ ನಿವಾಸಿ ನ್ನೀರ್ ಪಾಷಾ (50) (ಅಸಿಸ್ಟೆಂಟ್ ಆಫೀಸ್ ಸೂಪರಿಂಟೆಂಡೆಂಟ್, BSNL ಕಚೇರಿ, ಪಾಂಡೇಶ್ವರ) ಇವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಸುಮಾರು 45 ಕೆ.ಜಿ ತಾಮ್ರದ ಕೇಬಲ್ (ಅಂದಾಜು ಮೌಲ್ಯ ₹2,50,000) ಹಾಗೂ ಕಳವು ಮಾಡಿದ ಕೇಬಲ್ ಮಾರಾಟದಿಂದ ಬಂದಿರುವ ₹10,00,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.




