ಧರ್ಮಸ್ಥಳ: ಕನ್ಯಾಡಿ ಪುಡೈತ್ ಚಡವು ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಶರತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ಸೆಪ್ಟೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಜುಲೈ 30ರಂದು ನಿಡಿಗಲ್ ನಿವಾಸಿ ಬಾಲಕೃಷ್ಣ ಎಂಬುವವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕೃಷ್ಣ ಅವರನ್ನು ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಧರ್ಮಸ್ಥಳ ಠಾಣೆ ಪೊಲೀಸರು, ಕಾರು ಚಾಲಕ ಶರತ್‌ನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು. ಆ ಬಳಿಕ ಆಸ್ಟ್ 22ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ಸೆ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.




