ಬಜಪೆ : ಕಟೀಲು ದೇವಸ್ಥಾನದ ಪರಿಸರದಲ್ಲಿ ಸಂಚಾರ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಸಂಧ್ಯಾ ಎಂಬ ಮಹಿಳೆಯ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 1ರಂದು ಬುದ್ಧ ಪೂರ್ಣಿಮಾ ಮತ್ತು ರಜಾ ದಿನವಾದ್ದರಿಂದ ಕಟೀಲು ದೇವಸ್ಥಾನದಲ್ಲಿ ಅತೀ ಹೆಚ್ಚು ಭಕ್ತರ ದಟ್ಟಣೆ ಇತ್ತು. ಮಲ್ಲಿಗೆಯಂಗಡಿ ಜಂಕ್ಷನ್ ಬಳಿ ಬಜಪೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹೆಚ್.ಎನ್. ಹಾಗೂ ಸಿಬ್ಬಂದಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದರು. ಮಧ್ಯಾಹ್ನ 1:45ರ ಸುಮಾರಿಗೆ ಬಿಳಿ ಬಣ್ಣದ ಟೆಂಪೋ ಟ್ರಾವೆಲರ್ಸ್‌ನಲ್ಲಿ ಬಂದ ಸಂಧ್ಯಾ ಎಂಬವರು, ಪೊಲೀಸರು ಸೂಚಿಸಿದ ಪಾರ್ಕಿಂಗ್ ಜಾಗಕ್ಕೆ ಹೋಗಲು ನಿರಾಕರಿಸಿ ವಿವಾದ ಸೃಷ್ಟಿಸಿದ್ದಾರೆ.
ಪೊಲೀಸರು ಘನ ವಾಹನಗಳನ್ನು ಪಾರ್ಕಿಂಗ್ ಕಡೆಗೆ ಹೋಗುವಂತೆ ಸೂಚಿಸಿದಾಗ ಕೆರಳಿದ ಮಹಿಳೆ, “ಬೇರೆ ವಾಹನಗಳನ್ನು ಬಿಡುತ್ತಿದ್ದೀರಿ, ಅವರು ನಿಮ್ಮ ಅಪ್ಪನಾ.. ಅಮ್ಮನಾ..” ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, “ನಿಮ್ಮ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇನೆ, ಪೊಲೀಸರಿಗೆ ಬುದ್ಧಿ ಕಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಿಪಿಸಿ ಚಿದಾನಂದ ಅವರು ಮಹಿಳೆಯ ವಿರುದ್ಧ ಕ್ರಮಕ್ಕೆ ಕೋರಿ ದೂರು ನೀಡಿದ್ದಾರೆ.




