ಪುಣೆ: ತಾನು ದೇವರ ಅವತಾರ ಎಂದು ನಂಬಿಸಿ, ಮಹಿಳೆಯೊಬ್ಬಳ ಮೇಲೆ ವರ್ಷಗಳ ಕಾಲ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿ, ವಿದ್ಯುತ್ ಶಾಕ್ ನೀಡಿ, ಕಳ್ಳತನಕ್ಕೆ ಪ್ರಚೋದಿಸಿ ಹಾಗೂ ತನ್ನದೇ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿ ನರಕಯಾತನೆ ನೀಡಿದ್ದ ಸ್ವಯಂ ಘೋಷಿತ ದೇವಮಾನವ ಮತ್ತು ಆತನ ಏಳು ಮಂದಿ ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಬಂಧಿತ ಪ್ರಮುಖ ಆರೋಪಿ ‘ಬಾಬಾ’. ಈತ ಪುಣೆಯ ವಾಘೋಲಿಯ ಉಬಾಲೆ ನಗರ ಪ್ರದೇಶದಲ್ಲಿ ‘ಆಧುನಿಕ ಗುರುಕುಲ’ ಎಂಬ ಹೆಸರಿನಲ್ಲಿ ಆಶ್ರಮ ನಡೆಸುತ್ತಾ ದಂಧೆ ನಡೆಸುತ್ತಿದ್ದನು.ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆ 2010 ರಲ್ಲಿ ಈತನ ಸಂಪರ್ಕಕ್ಕೆ ಬಂದಿದ್ದಳು. ಅಂದಿನಿಂದ ಆಕೆಯನ್ನು ಪತಿಯಿಂದ ಪ್ರತ್ಯೇಕಿಸಿ, ವಿಚ್ಛೇದನ ಕೊಡಿಸಿದ್ದ ಈ ವಿಕೃತ ಬಾಬಾ, 2010 ರಿಂದ 2016 ರ ನಡುವೆ ಸತತವಾಗಿ ಲೈಂಗಿಕವಾಗಿ ಶೋಷಿಸಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಲ್ಲದೆ, ಆಶ್ರಮವನ್ನು ಶ್ರೀಮಂತಗೊಳಿಸಲು ಆಕೆಯಿಂದಲೇ ಕಳ್ಳತನ ಮಾಡಿಸಿದ್ದಾನೆ. ತಾನು ದೇವರ ಪುನರ್ಜನ್ಮ ಎಂದು ನಂಬಿಸಲು ಆಕೆಗೆ ಹಾಗೂ ಇತರ ಅನುಯಾಯಿಗಳಿಗೆ ತನ್ನ ಮೂತ್ರವನ್ನೇ ಕುಡಿಯುವಂತೆ ಒತ್ತಾಯಿಸುತ್ತಿದ್ದ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಾತು ಕೇಳದಿದ್ದಾಗ ವಿದ್ಯುತ್ ಆಘಾತ (Electric Shock) ನೀಡಿ ಕೊಲೆ ಮಾಡಲು ಯತ್ನಿಸಿದ್ದಾನೆ.ದೂರಿನ ಅನ್ವಯ ಪೊಲೀಸರು ಆಶ್ರಮದ ಮೇಲೆ ಸಡನ್ ದಾಳಿ ನಡೆಸಿದಾಗ ಅಲ್ಲಿನ ರಹಸ್ಯ ಭೂಗತ ಕೊಠಡಿಯೊಂದು ಪತ್ತೆಯಾಗಿದೆ. ಅಲ್ಲಿಂದ 12 ಲ್ಯಾಪ್ಟಾಪ್ಗಳು, 11 ಮೊಬೈಲ್ ಫೋನ್ಗಳು, 19 ಹಾರ್ಡ್ ಡ್ರೈವ್ಗಳು, ಪೆನ್ಡ್ರೈವ್ಗಳು, ₹6.5 ಲಕ್ಷ ನಗದು ಮತ್ತು ₹15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಭಾರಿ ಪ್ರಮಾಣದ ಔಷಧೀಯ ಮಾತ್ರೆ ಹಾಗೂ ನಶೆ ಏರಿಸುವ ದ್ರವಗಳು ಪತ್ತೆಯಾಗಿವೆ.ಮಿಶ್ರಾ ಹಾಗೂ ಆತನ ಆಪ್ತ ಸಹಾಯಕ ‘ಸ್ವಾಮಿ’ ಕನ್ವಾಲ್ ನಯನ್ ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವರಿಂದ ಇನ್ನು ಹಲವು ಮಹಿಳೆಯರು ಶೋಷಣೆಗೆ ಒಳಗಾಗಿರುವ ಶಂಕೆ ಇದ್ದು, ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ (FSL) ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




