ಕುಂದಾಪುರ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ತುಂಬಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಸೆ.29ರಂದು ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ದನವನ್ನು ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ತುಂಬಿಕೊಂಡು ತೆರಳಿದ್ದರು. ಈ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ನೀಡಿದ ದೂರಿನ ಆಧಾರದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡು, ಪ್ರಮುಖ ಆರೋಪಿ ಮೊಹಮ್ಮದ್ ಸಿನಾನ್ (20), ತಂದೆ ಅಬೂಬಕ್ಕರ್ ಸಿದ್ದಿಕ್, ತೋಟದ ಮನೆ, ಗುಲ್ವಾಡಿ ಅಂಚೆ ಮತ್ತು ಗ್ರಾಮ, ಕುಂದಾಪುರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಲಂ 303(2) ಬಿಎನ್ಎಸ್, ಪ್ರಿವೆನ್ಶನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ ಆಕ್ಟ್ 1960ರ ಕಲಂ 11(1)(d), ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 12 ಹಾಗೂ ಐಎಂವಿ ಕಾಯ್ದೆಯ ಕಲಂ 66(1) r/w 192(a) ಅಡಿ ಪ್ರಕರಣ ದಾಖಲಿಸಲಾಗಿದೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳಾದ ಎಚ್ಸಿ ನಾಗೇಂದ್ರ, ಸಿಪಿಸಿ ರುದ್ರೇಶ, ನವೀನ್ ಕುಮಾರ್, ವಿಲಾಸ್ ರಾಠೋಡ ಮತ್ತು ನಾಗರಾಜ ಅವರು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ಭಾಗಿಯಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ. ಬಂಧಿತ ಆರೋಪಿ ಮೊಹಮ್ಮದ್ ಸಿನಾನ್ ಕುಂದಾಪುರ ಉಪವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




