ಬೆಂಗಳೂರು : ಪೊಲೀಸ್ ಕಾನ್ಸ್ಟೆಬಲ್ ಒಬ್ಬ ದರೋಡೆ ಕೃತ್ಯದಲ್ಲಿ ಶಾಮೀಲಾಗಿ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾದ ಬೆನ್ನಿಗೆ ಇಂಥದ್ದೇ ಮತ್ತೊಂದು ಕೃತ್ಯ ಬೆಂಗಳೂರಿನಲ್ಲಿ ಸಂಭವಿಸಿದೆ. ಕಾಲ್ಸೆಂಟರ್ ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಪ್ರಕರಣ ಸಂಬಂಧ ಘಟನೆ ನಡೆದು 12 ಗಂಟೆ ಒಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬಿವುಲ್ಲ ಸೇರಿದಂತೆ 8 ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದು, ಆ ಪೈಕಿ ಛಲಪತಿ ಕೋಲಾರ ಜಿಲ್ಲೆಯ ಹೆಡ್ಕಾನ್ಸ್ಟೆಟೇಬಲ್ ಎಂದು ತಿಳಿದುಬಂದಿದೆ. ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈ.ಲಿ. ಸಂಸ್ಥೆಯ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು.
ಮಧ್ಯರಾತ್ರಿ ಕಾಲ್ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರು ಸಿಬ್ಬಂದಿಯನ್ನು ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದರು. ಬಳಿಕ ಪವನ್, ರಾಜ್ವೀರ್, ಆಕಾಶ್, ಅನಸ್ ಎಂಬವರನ್ನು ಅಪಹರಣ ಮಾಡಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆ ಆಪರೇಷನ್ ಮ್ಯಾನೇಜರ್ ಅಕೌಂಟ್ನಿಂದ 18 ಲಕ್ಷ ರೂ. ವರ್ಗಾವಣೆ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.
ವಿಷಯವನ್ನು ಬಿಪಿಒ ಸಿಬ್ಬಂದಿ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಆರೋಪಿಗಳ ಬೇಟೆಗೆ ಪೊಲೀಸರು ಮುಂದಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪತ್ತೆ ಮಾಡಿರುವ ಪೊಲೀಸರು ಹೊಸಕೋಟೆಯ ಲಾಡ್ಜ್ನಲ್ಲಿ ಆರೋಪಿಗಳು ಕೂಡಿ ಹಾಕಿದ್ದ ನಾಲ್ವರನ್ನು ರಕ್ಷಿಸಿದೆ. ಪ್ರಕರಣ ಸಂಬಂಧ 8 ಜನರ ಬಂಧನದ ಜೊತೆಗೆ 2 ಕಾರ್ ಸೀಜ್ ಮಾಡಲಾಗಿದೆ. ಇತ್ತಿಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಬಂಧಿತ ಎಲ್ಲ ಆರೋಪಿಗಳು 27-30 ವರ್ಷದ ಒಳಗಿನ ಯುವಕರು ಎಂಬುದು ಗೊತ್ತಾಗಿದೆ.



