ಉಳ್ಳಾಲ: ಇಲ್ಲಿನ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕವನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿ, ಕೇರಳ ಮೂಲದ ಇಬ್ಬರನ್ನು ಬಂಧಿಸಿ 1,15,110 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಾಸರಗೋಡಿನ ಬೀಚ್ ರೋಡ್ ನಿವಾಸಿ ಪ್ರಣವ್ ಪಿ ಶೆಣೈ (24) ಮತ್ತು ತಾಳಿಪಡ್ಪು ಅಡ್ಕತ್ತಬೈಲ್ ನಿವಾಸಿ ಅನೂಷ್ ಆರ್. ( 24) ಬಂಧಿತ ಆರೋಪಿಗಳು. ಆರೋಪಿಗಳಿಂದ ಅಕ್ರಮವಾಗಿ ಮದ್ಯ ತಯಾರಿಸುವ ಮೂರು ಮೆಶಿನ್ ಗಳು, ಮಿಕ್ಸರ್ ಮೆಶಿನ್, ಆಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 ಮ್ಯಾನ್ಶನ್ ಹೌಸ್ ಎಂಬ ಹೆಸರಿನ ಮದ್ಯದ ಬಾಟ್ಲಿಗಳು ಹಾಗೂ ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ವಿ.ಸಿ. ತೋಮಸ್ ಮತ್ತು ಮಣಿಕುಟ್ಟನ್ ಎಂಬ ಇನ್ನಿಬ್ಬರು ಆರೋಪಿಗಳು ಬಂಧನಕ್ಕೆ ಬಾಕಿ ಇದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ವಿಜಯಕ್ರಾಂತಿ ಅವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ವಿರೂಪಾಕ್ಷ, ಪಿಎಸ್ಐ ನಾಗರಾಜ್ ಮತ್ತು ಸಿಬಂದಿ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.




