ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಇರ್ಫಾನ್ (36) ಅವರ ಮೃತದೇಹ ಎಂದು ತಿಳಿದು ಬಂದಿದೆ.
ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಣೆ ಕಾರ್ಯ ಮಾಡುತ್ತಿದ್ದ ವೇಳೆ ಮೃತದೇಹ ನದಿಯಲ್ಲಿ ಕಂಡು ಬಂದಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಪೊಲೀಸರು ಹಾಗೂ ಗೂಡಿನಬಳಿಯ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿ, ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣಕ್ಕಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣದಲ್ಲಿ ಇಡಲಾಗಿತ್ತು.
ಸಂಜೆ ವೇಳೆ ಮೃತದೇಹದ ಗುರುತು ಪತ್ತೆಯಾಗಿದ್ದು, ಗೂಡಿನಬಳಿ ನಿವಾಸಿ ಇರ್ಫಾನ್ ಎಂದು ಹೇಳಲಾಗಿದೆ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಈತ ಮೂರು ವರ್ಷಗಳ ಹಿಂದೆಯಷ್ಟೆ ಊರಿಗೆ ಮರಳಿ ಬಳಿಕ ರಿಕ್ಷಾ ಖರೀದಿಸಿ ದುಡಿಯುತ್ತಿದ್ದರು. ವಿವಾಹಿತನಾಗಿರುವ ಅವರಿಗೆ ಮೂವರು ಮಕ್ಕಳಿದ್ದಾರೆ. ಆದರೆ ಮೂರು ದಿನಗಳಿಂದ ಕಾಣೆಯಾಗಿದ್ದರು ಎಂದು ಹೇಳಲಾಗಿದ್ದು, ಗುರುವಾರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಮೃತ ದೇಹದ ಕೈಗಳಲ್ಲಿ ಗಾಯಗಳಿರುವುದರಿಂದ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಕುಟುಂಬದವರು ಪಟ್ಟುಹಿಡಿದಿದ್ದಾರೆ.




