ಮಂಗಳೂರು ನಗರದ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ಟೋಬರ್ 22ರಂದು ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸುಮಾರು 30ರಿಂದ 35 ವರ್ಷ ವಯಸ್ಸಿನ ಯುವಕ ಮಹಾಕಾಳಿಪಡ್ಪು ಕಡೆಯಿಂದ ಜಪ್ಪಿನಮೊಗರು ಕಡೆಗೆ ರಾಷ್ಟ್ರೀಯ ಹೆದ್ದಾರಿಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.
ಮೃತ ಯುವಕನ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನ ಗುರುತು ಅಥವಾ ಆತನ ಕುಟುಂಬಸ್ಥರ ಬಗ್ಗೆ ಮಾಹಿತಿ ತಿಳಿದವರು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರನ್ನು 0824-2220850
ಅಥವಾ 9480805371 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ಮಂಗಳೂರು ಪೊಲೀಸ್ ನಿಸ್ತಂತು ಕೊಠಡಿಯ 0824-2220800 ಅಥವಾ 9480802321 ಸಂಖ್ಯೆಗಳಿಗೂ ಮಾಹಿತಿ ನೀಡುವಂತೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.




