ಉಡುಪಿ : ಮಲ್ಪೆ ಸಮೀಪ ಕೊಡವೂರಿನ ಗರಡಿಮಜಲು ಎಂಬಲ್ಲಿ ಬಾವಿ ತೋಡುವ ಕೆಲಸದ ವೇಳೆ ಒಂದು ಭಾಗ ಕುಸಿದು ಕೊಪ್ಪಳದ 25 ವರ್ಷದ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಮೃತರನ್ನು ರಮೇಶ್ (25) ಎಂದು ಗುರುತಿಸಲಾಗಿದ್ದು, ಇವರು ಕಾರ್ಕಳದ ಪ್ರಭಾತ್ ಶೆಟ್ಟಿ ಎಂಬವರ ಗುತ್ತಿಗೆಯಡಿ ಬಾವಿ ತೋಡುವ ಕೆಲಸಲ್ಲೆ ಇತರ ಐದು ಮಂದಿಯೊಂದಿಗೆ ಕಾರ್ಕಳದಿಂದ ಬಂದಿದ್ದರು.
ಬಾವಿ ತೋಡಿ ಕಾರ್ಮಿಕರು ಮೇಲೆ ಬರುವಾಗ ಕುಸಿತ ಸಂಭವಿಸಿದೆ. ಉಳಿದವರು ಅದಾಗಲೇ ಮೇಲೆ ಬಂದಾಗಿತ್ತು. ಹೀಗಾಗಿ ಅವರ ಪ್ರಾಣ ಉಳಿದಿದೆ. ರಮೇಶ್ ಮೇಲೆ ಬರುವಷ್ಟರಲ್ಲಿ ಕುಸಿತ ಉಂಟಾಗಿ ಅವರು ಭಾರಿ ಮಣ್ಣಿನ ರಾಶಿಯಡಿ ಸಿಲುಕಿ ಮೃತಪಟ್ಟಿದ್ದಾರೆ.
ಅವಘಡದ ಬಗ್ಗೆ ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕುಸಿದ ಮಣ್ಣಿನ ಅಡಿಯಿಂದ ರಕ್ಷಣಾ ತಂಡಗಳು ಕಾರ್ಮಿಕನ ಮೃತದೇಹವನ್ನು ಹೊರತೆಗೆದಿವೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರ ಸ್ಥಳದಲ್ಲಿ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಆಗಾಗ ಮಳೆಯಾಗುತ್ತಿರುವುದರಿಂದ ಮಣ್ಣು ಮೆದುವಾಗಿ ಕುಸಿತ ಎಂಭವಿಸಿದೆ ಎನ್ನಲಾಗಿದೆ.




