ಮಂಗಳೂರು : ಸರ್ಕಾರಿ ಬಸ್‌ನಲ್ಲಿ ಹಗ್ಗ ಎಳೆದದ್ದನ್ನು ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನೊಬ್ಬ ಕೇರಳ ಸಾರಿಗೆ ಬಸ್ ಕಂಡಕ್ಟರ್ ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಡೆದಿದೆ. ಕೇರಳ ರಾಜ್ಯದ ಕೆಎಸ್‌ಆರ್‌ಟಿಸಿ ಕಾಸರಗೋಡು ವಿಭಾಗದಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶನ್ ಕೆ.ಪಿ (52) ಹಲ್ಲೆಗೊಳಗಾದ ಸಿಬ್ಬಂದಿ
ಸೆಪ್ಟೆಂಬರ್ 12ರಂದು ರಾತ್ರಿ 9:30ಕ್ಕೆ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೊರಟಿದ್ದ ‘KL 15 A 1044’ ನೋಂದಣಿ ಸಂಖ್ಯೆಯ ಬಸ್‌ನಲ್ಲಿ ಸತೀಶನ್ ಕಂಡಕ್ಟರ್ ಆಗಿ ಹಾಗೂ ಸುರೇಶ್ ಎಂ.ಪಿ ಚಾಲಕರಾಗಿ ಕರ್ತವ್ಯದಲ್ಲಿದ್ದರು. ರಾತ್ರಿ 10:20ರ ಸುಮಾರಿಗೆ ಬಸ್ ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಬಂದಾಗ ತಾರಾನಾಥ ಎಂಬ ಆರೋಪಿ ಬಸ್ ಏರಿದ್ದನು.
ಬಸ್ ಮುಂಚಲಿಸುತ್ತಿದ್ದಂತೆ ಆರೋಪಿ ತಾರಾನಾಥ ಏಕಾಏಕಿ ಬಸ್‌ನಲ್ಲಿದ್ದ ಸ್ಟಾಪ್ ಬೆಲ್‌ನ ಹಗ್ಗವನ್ನು ಎಳೆದಿದ್ದಾನೆ. ಇದನ್ನು ಕಂಡಕ್ಟರ್ ಸತೀಶನ್ ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಆರೋಪಿ, “ಬೇವರ್ಷಿ, ನೀವು ಕೇರಳದವರು, ನಿಮಗೆ ಬಾರಿ ಅಹಂಕಾರ” ಎಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಕೋಪೋದ್ರಿಕ್ತನಾದ ಆರೋಪಿ ತಾರಾನಾಥ, ಕಂಡಕ್ಟರ್ ಸತೀಶನ್ ಅವರ ಕೆನ್ನೆಗೆ ಹೊಡೆದು, ತನ್ನ ಕೈಯಲ್ಲಿದ್ದ ಸ್ಟೀಲ್ ಬಳೆಯಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದಾನೆ. ಈ ವೇಳೆ ಬಿಡಿಸಲು ಬಂದ ಚಾಲಕ ಸುರೇಶ್ ಅವರ ಕೆನ್ನೆ ಹಾಗೂ ತಲೆಗೂ ಕೈಯಿಂದ ಹೊಡೆದು, ಇಬ್ಬರೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ಕಂಡಕ್ಟರ್ ಸತೀಶನ್ ಅವರನ್ನು ತಕ್ಷಣವೇ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ




