ಕೊಚ್ಚಿ: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಕೇರಳ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ತಮಗೆ ಮತ್ತು ತಮ್ಮ ಪತಿಗೆ ತುರ್ತಾಗಿ ಪೊಲೀಸ್ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರ ಮತ್ತು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಗೆ ಆದೇಶಿಸಬೇಕು ಎಂದು ಕೋರಿ ಮೊನಾಲಿಸಾ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಕೋರ್ಟ್ ಹೇಳಿದ್ದೇನು?: ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ಅರ್ಜಿದಾರರಿಗೆ ರಕ್ಷಣೆ ನೀಡುವ ಅಗತ್ಯವಿರುವುದು ಮೇಲ್ನೋಟಕ್ಕೆ ಮನವರಿಕೆಯಾಗಿದೆ. ಅದರಂತೆ, ಈ ರಿಟ್ ಅರ್ಜಿ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ಅರ್ಜಿದಾರರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಪೊಲೀಸರಿಗೆ ತುರ್ತು ನಿರ್ದೇಶನ ನೀಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.ಪ್ರಕರಣದ ಹಿನ್ನೆಲೆ ಮತ್ತು ವಿವಾದ: ಇಂದೋರ್ ಮೂಲದ ಆಕರ್ಷಕ ನಗುವಿನ ಬೆಡಗಿ ಮೊನಾಲಿಸಾ, ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಇವರ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊ ಕೋಟ್ಯಂತರ ವೀಕ್ಷಣೆ ಪಡೆದು ಮೊನಾಲಿಸಾ ಇಡೀ ದೇಶದ ಗಮನ ಸೆಳೆದಿದ್ದರು.ಆದರೆ, ಇತ್ತೀಚೆಗೆ ಮೊನಾಲಿಸಾ ಅವರು ಮೊಹಮ್ಮದ್ ಫರ್ಮಾನ್ ಖಾನ್ ಎಂಬುವವರನ್ನು ವಿವಾಹವಾಗಿದ್ದರು. ಈ ಮಧ್ಯೆ ಮೊನಾಲಿಸಾ ತಂದೆಯು, “ನನ್ನ ಮಗಳು ಇನ್ನೂ ಅಪ್ರಾಪ್ತ ವಯಸ್ಸಿನವಳು” ಎಂದು ಆರೋಪಿಸಿ ಮಧ್ಯಪ್ರದೇಶ ಪೊಲೀಸರಿಗೆ ದೂರು ನೀಡಿದ್ದರು. ತಂದೆಯ ದೂರಿನ ಆಧಾರದ ಮೇಲೆ ಮಧ್ಯಪ್ರದೇಶ ಪೊಲೀಸರು ಪತಿ ಮೊಹಮ್ಮದ್ ಫರ್ಮಾನ್ ಖಾನ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ತಮಗೆ ರಕ್ಷಣೆ ಕೋರಿ ಮೊನಾಲಿಸಾ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.




