ನವದೆಹಲಿ : ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ತೀವ್ರ ಜಾಗತಿಕ ಸಂಘರ್ಷದಿಂದಾಗಿ ತೈಲ ಸರಬರಾಜಿಗೆ ತಡೆಯುಂಟಾಗಿದ್ದು, ಇದರ ನೇರ ಪರಿಣಾಮವಾಗಿ ದೇಶದಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಸಿಲಿಂಡರ್ ಬೆಲೆ ಮತ್ತೆ ಏರಿಕೆ ಕಂಡಿದೆ. ದೇಶದಾದ್ಯಂತ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹42 ರಿಂದ ₹53 ರವರೆಗೆ ಹೆಚ್ಚಳವಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಆದಾಗ್ಯೂ, ಸಾರ್ವಜನಿಕರಿಗೆ ನಿರಾಳ ಸುದ್ದಿ ಎಂಬಂತೆ ಗೃಹ ಬಳಕೆಯ (Domestic) ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಬೆಲೆ ಏರಿಕೆಯ ಬಳಿಕ ದೇಶದ ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರಗಳು ಈ ಕೆಳಗಿನಂತಿವೆ:ನವದೆಹಲಿ: ₹42 ಹೆಚ್ಚಳದೊಂದಿಗೆ ಸಿಲಿಂಡರ್ ಬೆಲೆ ₹3,113.50 ಕ್ಕೆ ತಲುಪಿದೆ.ಕೋಲ್ಕತ್ತ: ಗರಿಷ್ಠ ₹53.49 ಏರಿಕೆಯಾಗಿದ್ದು, ಹೊಸ ದರ ₹3,225 ಆಗಿದೆ.ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಸಿಲಿಂಡರ್ ಬೆಲೆ ₹3,024.50 ಕ್ಕೆ ಏರಿದೆ.ಚೆನ್ನೈ: ತಮಿಳುನಾಡು ರಾಜಧಾನಿಯಲ್ಲಿ ಇಂದಿನ ದರ ₹3,232 ಆಗಿದೆ.ಹೈದರಾಬಾದ್ ಮತ್ತು ಪಾಟ್ನಾ: ಇಲ್ಲಿ ಕ್ರಮವಾಗಿ ಬೆಲೆಯು ₹3,294 ಮತ್ತು ₹3,322 ಕ್ಕೆ ಏರಿಕೆಯಾಗಿದೆ.ಐದೇ ತಿಂಗಳಲ್ಲಿ ದುಪ್ಪಟ್ಟಾದ ಬೆಲೆ:ಈ ವರ್ಷದ ಆರಂಭದಿಂದಲೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ನಿರಂತರವಾಗಿ ಏರುತ್ತಲೇ ಸಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ ತಿಂಗಳಲ್ಲಿ ₹1,691.50 ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ, ಈಗ ₹3,113.50 ತಲುಪಿದೆ. ಫೆಬ್ರುವರಿಯಲ್ಲಿ ₹49, ಮಾರ್ಚ್‌ನಲ್ಲಿ ₹115 ಮತ್ತು ಏಪ್ರಿಲ್ ತಿಂಗಳಲ್ಲಿ ದಾಖಲೆಯ ₹993 ಹೆಚ್ಚಳ ಮಾಡಲಾಗಿತ್ತು. ಇದರ ಪರಿಣಾಮವಾಗಿ ಕೇವಲ ಐದು ತಿಂಗಳ ಅವಧಿಯಲ್ಲಿ ವಾಣಿಜ್ಯ ಎಲ್‌ಪಿಜಿ ದರಗಳು ಬರೋಬ್ಬರಿ ದ್ವಿಗುಣಗೊಂಡಂತಾಗಿದೆ.30 ದಿನಗಳ ಸಂಗ್ರಹಕ್ಕೆ ಸರ್ಕಾರದ ಸೂಚನೆ:ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರುಪೇರುಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ದೇಶದಲ್ಲಿ ಕನಿಷ್ಠ 30 ದಿನಗಳ ಬೇಡಿಕೆಗೆ ಅಗತ್ಯವಿರುವಷ್ಟು ಎಲ್‌ಪಿಜಿ ದಾಸ್ತಾನು ಹೊಂದಿರಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.




