ಮಂಗಳೂರು : ಒಎಲ್‌ಎಕ್ಸ್ (OLX) ಆನ್‌ಲೈನ್ ಮಾರುಕಟ್ಟೆಯಲ್ಲಿ ಐಷಾರಾಮಿ ‘ಕಾಂಟಿನೆಂಟಲ್ ಜಿಟಿ 650’ ಮೋಟಾರು ಸೈಕಲ್ ಮಾರಾಟಕ್ಕಿದೆ ಎಂದು ನಕಲಿ ಜಾಹೀರಾತು ನೀಡಿ, ತಂದೆ-ಮಗನಿಗೆ ಬರೋಬ್ಬರಿ ₹5,58,710 ಹಣ ವಂಚಿಸಿ, ಬಳಿಕ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ವಂಚಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ದೂರುದಾರರು ತಮ್ಮ ಮಗ ಬೈಕ್ ಕೊಡಿಸುವಂತೆ ಕೇಳಿದ ಕಾರಣಕ್ಕಾಗಿ OLX ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಕಾಂಟಿನೆಂಟಲ್ ಜಿಟಿ 650 ಬೈಕ್ ಮಾರಾಟಕ್ಕಿರುವ ಮಾಹಿತಿ ಲಭ್ಯವಾಗಿತ್ತು.
ಬೈಕ್ ಮಾರಾಟಗಾರ ತನ್ನನ್ನು ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಉಸ್ಮಾನ್ ಆಟೋ ಕನ್ಸಲ್ಟೆಂಟ್ಸ್’ ಏಜೆನ್ಸಿಯ ಸೈಯದ್ ತೌಸಿಫ್ ಪಾಷಾ ಎಂದು ಪರಿಚಯಿಸಿಕೊಂಡಿದ್ದನು. ಆರಂಭದಲ್ಲಿ ರಿಜಿಸ್ಟ್ರೇಷನ್ ಮೊತ್ತವಾಗಿ ₹5,000 ಹಾಗೂ ಕಮಿಷನ್ ಆಗಿ ₹10,000 ನೀಡಬೇಕು ಎಂದು ನಂಬಿಸಿದ್ದನು. ಇದನ್ನು ನಂಬಿದ ತಂದೆ-ಮಗ ಬೈಕ್ ಖರೀದಿಗೆ ಒಪ್ಪಿದಾಗ, ಆರೋಪಿಯು ₹57,000 ಮುಂಗಡ ಹಣ ಕೇಳಿದ್ದಾನೆ. ಅದರಂತೆ ಫೆಬ್ರವರಿ 18, 2026 ರಂದು ಯುಪಿಐ (UPI) ಮುಖಾಂತರ ಆತನ ಮೊಬೈಲ್ ಸಂಖ್ಯೆಗೆ (6362848200) ಹಣ ವರ್ಗಾಯಿಸಲಾಗಿದೆ. ತದನಂತರ ಆರೋಪಿಯು ವಿವಿಧ ನೆಪಗಳನ್ನು ಹೇಳಿ ಬೇರೆ ಬೇರೆ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ನೆಫ್ಟ್ (NEFT), ಐಎಂಪಿಎಸ್ (IMPS) ಮೂಲಕ ಹಂತ ಹಂತವಾಗಿ ಮಾರ್ಚ್ 4, 2026 ರ ಒಳಗೆ ಒಟ್ಟು ₹5,58,710 ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.
ಇಷ್ಟೆಲ್ಲಾ ಹಣ ಪಡೆದ ಮೇಲೆಯೂ ಸೈಯದ್ ತೌಸಿಫ್ ಪಾಷಾ ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಸಂತ್ರಸ್ತ ಯುವಕನಿಗೆ ಪೀಡಿಸಿದ್ದಾನೆ. ಇದರಿಂದ ಅನುಮಾನಗೊಂಡು ತಂದೆ-ಮಗ ತಕ್ಷಣವೇ ಬೈಕ್ ಕೊಡಿ ಇಲ್ಲವೇ ನಮ್ಮ ಹಣ ವಾಪಸ್ ನೀಡಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆರೋಪಿಯು ಯುವಕನಿಗೆ ಫೋನ್‌ನಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ, “ನಾನು ಯಾರು ಎಂದು ನಿಮಗೆ ತೋರಿಸುತ್ತೇನೆ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಒಎಲ್‌ಎಕ್ಸ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ನಂಬಿಸಿ ವಂಚಿಸಿರುವ ಆರೋಪಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.




