ಮಂಗಳೂರು: ಬಜಪೆ ಸಮೀಪ ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ ಮನೀಶ್ ಶರ್ಮಾ (25) ಅವರ ಅಸ್ಥಿಪಂಜರ ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನ.13ರಂದು ಪತ್ತೆಯಾಗಿದೆ.
ಬಜಪೆ ಏರ್ಪೋರ್ಟ್ನಲ್ಲಿ ಹಿಟಾಚಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೀಶ್ ಅ.27ರಂದು ಸ್ನೇಹಿತ ಶ್ರವಣ್ ಜೊತೆ ಬೈಕ್ನಲ್ಲಿ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಸೋನು ಶರ್ಮಾ ನ.1ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಮನೀಶ್ ಶ್ರವಣ್ ಜೊತೆ ತೆರಳಿದ್ದು, ಬಳಿಕ ಶ್ರವಣ್ ಒಬ್ಬನೇ ವಾಪಸ್ಸಾಗಿರುವುದು ಕಂಡುಬಂದಿತ್ತು. ಅಲ್ಲದೆ, ಮನೀಶ್ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ವಿಚಾರವೂ ಬೆಳಕಿಗೆ ಬಂದಿದೆ.
ನ.13ರಂದು ಹುಡುಕಾಟ ನಡೆಸುತ್ತಿದ್ದಾಗ ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದ ಹೊಂಡದಲ್ಲಿ ಮೂಳೆಯ ತುಂಡುಗಳು, ತಲೆಬುರುಡೆಯ ಚೂರುಗಳು ಹಾಗೂ ಬಟ್ಟೆಗಳು ಪತ್ತೆಯಾಗಿವೆ. ಪತ್ತೆಯಾದ ಬಟ್ಟೆಗಳು ಮನೀಶ್ ಅವರಿಗೆ ಸೇರಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ನೇಹಿತ ಶ್ರವಣ್ ಯಾವುದೋ ದುರುದ್ದೇಶದಿಂದ ಮನೀಶ್ ಅವರನ್ನು ಕೊಲೆ ಮಾಡಿ ಸಾಕ್ಷ್ಯ ಮುಚ್ಚಿಟ್ಟಿರುವ ಶಂಕೆ ವ್ಯಕ್ತಪಡಿಸಿ ಸೋನು ಶರ್ಮಾ ದೂರು ನೀಡಿದ್ದಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




