ಪುತ್ತೂರು:ಕಬಕ ಸಮೀಪದ ಪೋಳ್ಯದಲ್ಲಿ ಎವಿಯೇಟರ್ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.25ರಂದು ನಡೆದಿದೆ. ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್ ರಾಜ(45ವ. )ಮೃತಪಟ್ಟವರು.ಸ್ಕೂಟರ್ ಸಹಸವಾರರಾಗಿದ್ದ, ಬಿಹಾರ ಮೂಲದವರಾಗಿದ್ದು ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್ (29ವ) ಮತ್ತು ಸನ್ನೀಫ್ (28ವ)ಗಾಯಗೊಂಡಿದ್ದಾರೆ.ಕ್ಲಿಫರ್ಡ್ ಮೊರಾಸ್ ಅವರು ಆದಿತ್ಯವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಾದ್ದರಿಂದ, ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಬಿಹಾರ ಮೂಲದ ಕಾರ್ಮಿಕರಾದ ಸುರೇಂದರ್ ಮತ್ತು ಸನ್ನೀಫ್ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರನ್ನು ಮುರ ರೂಮ್ ಗೆ ಬಿಡಲೆಂದು ಸ್ಕೂಟರ್ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸಹ ಸವಾರರಾಗಿದ್ದ ಸುರೇಂದರ್ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದು, ಸನ್ನೀಫ್ ಅವರ ಮುಖಕ್ಕೆ ಗಾಯವಾಗಿದೆ. ಗಾಯಾಳುಗಳಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತ ರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.