ಬಂಟ್ವಾಳ: 1,05,59,450 ರೂ. ಮೌಲ್ಯದ ಎಂಡಿಎಂಎ, ಕೊಕೇನ್ ಸೇರಿದಂತೆ ಇತರ ವಸ್ತುಗಳನ್ನು ಸಾಗಿಸುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಬಂಧಿತ ಆರೋಪಿ.ಆ.16 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಟಿ ಅವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಮೇರೆಗೆ, ಸಿಬ್ಬಂದಿಗಳೊಂದಿಗೆ ತಡರಾತ್ರಿ ಕಾರೊಂದನ್ನು ತಡೆದು ವಾಹನ ಚಾಲಕನನ್ನು ವಿಚಾರಿಸಿದ್ದಾರೆ.ಈ ವೇಳೆ ಆತನು ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಕಾರನ್ನು ತಪಾಸಣೆ ನಡೆಸಿದಾಗ ಒಟ್ಟು 3538.63 ಗ್ರಾಂ ಎಂಡಿಎಂಎ ಮತ್ತು 99.12 ಗ್ರಾಂ ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ. ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.53,86,300 ರೂ. ಮೌಲ್ಯದ ಎಂಡಿಎಂಎ, 49,56,000 ರೂ. ಮೌಲ್ಯದ ಕೊಕೈನ್ ಹಾಗೂ ಇತರೆ ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಸೇರಿದಂತೆ ಒಟ್ಟು 1,05,59,450 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 113/2026, ಕಲಂ: 8(C) r/w 22(C), 21(ಬಿ) NDPS ACT 1985 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.




