ಪ್ರತಿನಿತ್ಯ ಸಾವಿರಾರು ಭಕ್ತರು ಯಾವುದೇ ನೂಕು ನುಗ್ಗಲು ಇಲ್ಲದೇ ಸಾವಕಾಶವಾಗಿ ಪಡೆಯುತ್ತಿದ್ದ ದುರ್ಗೆಯ ದರ್ಶನಕ್ಕೆ ಈಗ ಮೊತ್ತ ವಿಧಿಸಲಾಗಿದೆ.
ಕ್ಷೇತ್ರದಲ್ಲಿ ಇದೀಗ ಶೀಘ್ರ ದರ್ಶನ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಶೀಘ್ರ ದರ್ಶನ ಪಡೆಯುವ ಪ್ರತಿಯೋರ್ವ ಭಕ್ತನು ನೂರು ರೂಪಾಯಿ ಪಾವತಿಸಿ ದೇವಸ್ಥಾನದ ಒಳಗೆ ಪ್ರವೇಶ ಮಾಡಬಹುದಾಗಿದೆ.
ನವರಾತ್ರಿ ಯ ಬಳಿಕ ಈ ಹೊಸ ನಿಯಮವನ್ನು ಕ್ಷೇತ್ರದಲ್ಲಿ ತರಲಾಗಿದೆ. ಸಾವಿರಾರು ಭಕ್ತರು ಸೇರಿದರೂ ಯಾವುದೇ ಗೊಂದಲ, ನೂಕು ನುಗ್ಗಲು ಆಗದಂತೆ ನಡೆಯುತ್ತಿದ್ದ ವ್ಯವಸ್ಥೆಗೆ ಈಗ ಶೀಘ್ರ ದರ್ಶನ ಎಂಬುದನ್ನು ಸೇರಿಸಿ ನೂರು ರೂಪಾಯಿ ಮೊತ್ತ ಹಾಕಲಾಗುತ್ತಿದೆ. ಈ ಹಿಂದೆ ಪಾರ್ಕಿಂಗ್ ಮೊತ್ತವನ್ನು ಹಾಕಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿತ್ತು. ಈ ನಿಯಮಕ್ಕೆ ಕ್ಷೇತ್ರದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಕ್ತರ ವಿರೋಧ ಹಿನ್ನಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರವನ್ನು ಹಿಂಪಡೆದಿತ್ತು. ಈಗ ಶೀಘ್ರ ದರ್ಶನದ ಹೆಸರಿನಲ್ಲಿ ಮತ್ತೆ ಹಣ ಮಾಡುವ ದಂಧೆಗೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವುದು ಕ್ಷೇತ್ರದ ಭಕ್ತರ ಅಸಮಾಧಾನವಾಗಿದೆ.
ಶುಕ್ರವಾರ ಅತೀ ಹೆಚ್ಚು ಭಕ್ತರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಜಾದಿನದಲ್ಲೂ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತದೆ. ಹೀಗಾಗಿ ಹಲವು ಭಕ್ತರಿಗೆ ಸರತಿಸಾಲಿನಲ್ಲಿ ನಿಂತು ದರ್ಶನ ಪಡೆಯಲು ಸಾಧ್ಯವಾಗದ ಕಾರಣ ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ವಾದವಾಗಿದೆ.
ಇತರ ದೇವಸ್ಥಾನದಲ್ಲಿ ಇರುವಂತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ದೇವಳದ ಭಕ್ತರ ಅಭಿಪ್ರಾಯವಾಗಿದೆ. ದೇವಳದ ಒಳಾಂಗಣ ವಿಶಾಲವಾಗಿರೋದರಿಂದ ವಿಶೇಷ ದರ್ಶನದಲ್ಲಿ ಬರುವ ಭಕ್ತನಿಗೂ ಸಾಮಾನ್ಯ ಸರತಿಸಾಲಿನಿಂದ ಬರುವ ಭಕ್ತನಿಗೂ ಯಾವುದೇ ವ್ಯತ್ಯಾಸ ಇಲ್ಲದೇ ದೇವರ ದರ್ಶನವನ್ನು ಪಡೆಯಬಹುದಾಗಿದೆ. ನೇರವಾಗಿ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಮಾತ್ರ ಶೀಘ್ರ ದರ್ಶನ ಟಿಕೆಟ್ ಸಹಾಯವಾಗಬಲ್ಲದು, ಅದರ ಹೊರತು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಕ್ಷೇತ್ರದ ಭಕ್ತರೋರ್ವರ ಅಭಿಪ್ರಾಯವಾಗಿದೆ