ವಿಟ್ಲ: ತಾಯಿಯೊಬ್ಬಳು ತನ್ನ ವಿಕಲಚೇತನ ಮಗುವಿನ ಗಂಟಳಿಗೆ ಕೋಲು ಹಾಕಿ ಕುತ್ತಿಗೆ ಹಿಡಿದುಕೊಲೆ ಮಾಡಲು ಯತ್ನಿಸಿದ ಘಟನೆ ಅನಂತಾಡಿ ಗ್ರಾಮದ ಕರಿಂಕ ಎಂಬಲ್ಲಿ ನಡೆದಿದೆ. ಬೆಳಿಯಪ್ಪಗೌಡ ಕುಸುಮ ದಂಪತಿಯ ಏಕೈಕ ಪುತ್ರ ದರ್ಶಿತ್(9)ಎಂಬಾತನೇ ತನ್ನ ಜನ್ಮದಾತೆಯ ರಾಕ್ಷಸೀಕೃತ್ಯಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನತದೃಷ್ಟ ಬಾಲಕ. ಹುಟ್ಟಿನಿಂದಲೇ ವಿಕಲಚೇತನನಾಗಿದ್ದ ದರ್ಶಿತ್ ತನ್ನ ಪೋಷಕರಿಗೆ ಏಕೈಕ ಕರುಳಕುಡಿಯಾಗಿದ್ದಾನೆ. ಅನಂತಾಡಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿರುವ ದರ್ಶಿತ್ ಪಾಲಿಗೆ ಇಂದು ಕರಾಳ ರಾತ್ರಿಯಾಗಿದೆ. ಹೆತ್ತು, ಹೊತ್ತು ಸಾಕಿ ಸಲಹಬೇಕಾಗಿದ್ದ ತಾಯಿ ಕುಸುಮ ಯಮರಾಜನ ರೂಪದಲ್ಲಿ ಬದಲಾಗಿದ್ದಾಳೆ. ತನ್ನ ಪುತ್ರನ ಕತ್ತು ಹಿಸುಕಿದ ತಾಯಿ ಕುಸುಮಾ ಅಷ್ಟಕ್ಕೂ ತೃಪ್ತಳಾಗದೇ ಆತನ ಬಾಯಿಗೆ ದೊಣ್ಣೆ ತುರುಕಿ ಕೊಲೆಗೆ ಯತ್ನಿಸಿದ್ದಾಳೆ.ಮನೆಯೊಳಗೆ ವಿಕಲಚೇತನ ಪುತ್ರನ ಕಿರುಚಾಟ ಕೇಳಿಸಿಕೊಂಡ ತಂದೆ ಬೆಳ್ಳಿಯಪ್ಪ ಗೌಡರು ಅಂಗಳದಿಂದ ಓಡಿ ಮನೆಯೊಳಗೆ ಬರುತ್ತಿದ್ದಂತೆ ಆಘಾತ ಕಾದಿತ್ತು. ಪುತ್ರನ ಮೇಲೆ ಪತ್ನಿ ನಡೆಸುತ್ತಿದ್ದ ಕೌರ್ಯ ಕಣ್ಣಾರೆ ನೋಡುತ್ತಿದ್ದಂತೆ ತಡೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ರಾಕ್ಷಸೀ ರೂಪ ತಾಳಿದ್ದ ಪತ್ನಿ ಕುಸುಮಾ ಪತಿಯ ಮೇಲೆ ಮುಗಿಬಿದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ತಕ್ಷಣವೇ ಸ್ಥಳೀಯರು ವಿಟ್ಲದ ತುರ್ತು ವಾಹನಕ್ಕೆ ಕರೆಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಸಲಹೆಯಂತೆ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನನ್ನು ಇದೀಗ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಹೆತ್ತ ತಾಯಿಯೇ ತನ್ನ ವಿಕಲ ಚೇತನ ಕರುಳಕುಡಿಯ ಕೊಲೆಗೆ ಯತ್ನಿಸಿದ್ದಲ್ಲದೇ ತಡೆಯಲು ಬಂದ ಪತಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ರಾಕ್ಷಸೀ ಕೃತ್ಯಕ್ಕೆ ಜನ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.