ಮಂಗಳೂರು MRPL ಹಾಗೂ MSEZ ಸಂಸ್ಥೆಗಳಿಂದ ಉಂಟಾಗುತ್ತಿರುವ ನಾನಾ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ “ಎಂ. ಆರ್. ಪಿ.ಎಲ್ – ಎಂ.ಎಸ್. ಇ. ಝಡ್ ಗುತ್ತಿಗೆ ಕಾರ್ಮಿಕರ ಹಾಗೂ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಸ್ಥಳೀಯ ನಾಗರಿಕ ವೇದಿಕೆ ಮತ್ತು ಇತರ ಸಂಘಟನೆಗಳ ಒಕ್ಕೂಟ “ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು,ರಾಜ್ಯ ಆರೋಗ್ಯ ಸಚಿವರಾದ ಯು. ಟಿ. ಖಾದರ್ ಇವರಿಗೆ ,ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಪದ್ಮರಾಜ್ ಪೂಜಾರಿ ಇವರ ಉಪಸ್ಥಿತಿಯಲ್ಲಿ ಮನವಿಯನ್ನು ಹೋರಾಟ ಸಮಿತಿಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಪ್ರಸನ್ನ ರವಿ ಜೆಡಿಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ, ದಾಸ್ ಚಾರಿಟಬಲ್ ಸೇವಾ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ಅನಿಲ್ ದಾಸ್, ಸಾಮಾಜಿಕ ಮುಖಂಡರಾದ ಯಾದವ ಕೋಟ್ಯಾನ್ ಪೆರ್ಮುದೆ, ಅನಿಲ್ ಮಂಗಳೂರು, ಅಕ್ಷಯ್ ಮಂಗಳೂರು,MRPL 4ನೇ ಹಂತ ಭೂ ನಿರ್ವಹಿಸಿತರ ಸಮಿತಿಯ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಕುತ್ತೆತ್ತೂರು, ಗೌರವಾಧ್ಯಕರಾದ ಡ್ಯಾನಿಸ್ ವಾರಿಸ್, ಕಳವಾರ್ ವಿನಸೆಂಟ್ ಕೋಡಿಕಲ್, ಪುರಂದರ ಕೂಳೂರು , ಜೆ ಡಿ ಎಸ್ ನ ಸುಮತಿ ಹೆಗ್ಡೆ, ರಿತೇಶ್ ಕರ್ಕೇರ
ಸಂತ್ರಸ್ತ ಸಮಿತಿಯ ಪ್ರಮುಖರಾದ ಸಂತೋಷ್ ಕೊರಯ ಕಳವಾರ್, MRPL ಮಜ್ದೂರು ಸಂಘದ ಪ್ರಮುಖರು , ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.
ಮನವಿಯಲ್ಲಿರುವ ಪ್ರಮುಖ ಬೇಡಿಕೆಗಳು:
ಸಂಸ್ಥೆಯ ಸಂಸ್ಥೆಯೊಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ,ವೈದ್ಯಕೀಯ ಸೌಲಭ್ಯ ಹಾಗೂ ತುರ್ತು ಅವಘಡದ ಮಾಹಿತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಯಾದ ಕುಟುಂಬಗಳಿಗೆ ಸೂಕ್ತ ಉದ್ಯೋಗ ಮತ್ತು ಹೆಚ್ಚುವರಿ ಪರಿಹಾರ ಒದಗಿಸಬೇಕು.
4ನೇ ಹಂತದ ಭೂಸ್ವಾಧೀನದ ವೇಳೆ ನೀಡಿದ್ದ ಭರವಸೆಯಂತೆ ಭೂನಿರ್ವಹಿಸಿತರಿಗೆ ಉದ್ಯೋಗ ನೀಡಬೇಕು,ಜೊತೆಗೆ ಅರ್ಹ ಸ್ಥಳೀಯ ಅಭ್ಯರ್ಥಿಗಳಿಗೆ ನೇರ ಉದ್ಯೋಗಾವಕಾಶ ಮೀಸಲಿಡಬೇಕು.
ಕಳವಾರ್ ನಿವಾಸಿಗಳಿಗೆ ಪರಿಹಾರ : ಇತ್ತೀಚಿಗೆ ಸಂಭವಿಸಿದ ಸ್ಪೋಟದ ದುರ್ಘಟನೆಯಿಂದ ಜೀವಭಯದಲ್ಲಿ ಕಾಲ ಕಳೆಯುತ್ತಿರುವ ಕಳವಾರ್ ನಿವಾಸಿಗಳ ಮನೆ ಮತ್ತು ಜಮೀನನ್ನು ಸರ್ಕಾರಿ ಅಧಿಸೂಚನೆ ಮೂಲಕ ಸ್ವಾಧೀನ ಪಡಿಸಿಕೊಂಡು MRPL ಸಂಸ್ಥೆಯಿಂದ ಸೂಕ್ತ ಪರಿಹಾರ ಒದಗಿಸಬೇಕು.
ಆಸುಪಾಸಿನ ಗ್ರಾಮಗಳಲ್ಲಿ ವ್ಯಾಪಿಸಿರುವ ಕೊಳಚೆ ನೀರು ಮತ್ತು ದುರ್ವಾಸನೆಯ ಸಮಸ್ಯೆಗಳನ್ನು ತಕ್ಷಣ ನಿವಾರಿಸಬೇಕು.ಕಂಪೆನಿಯ ಸಿ.ಎಸ್.ಆರ್(CSR)ಶೇಕಡಾ 75% ಮೊತ್ತವನ್ನು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು.
ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ,ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಸಭೆ ನಡೆಸಬೇಕು




