ಬೆಳ್ತಂಗಡಿ: ರಾಜ್ಯಾದ್ಯಂತ ಭಾರೀ ಸಂಚಲನ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಸೂಚನೆಯಂತೆ ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಿರಿಯ ಪೊಲೀಸ್ ಅಧಿಕಾರಿ, ಐಜಿಪಿ (IGP) ಎನ್. ಶಶಿಕುಮಾರ್ ಅವರನ್ನು ಈ ಎಸ್‌ಐಟಿ ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಎಸ್‌ಐಟಿ ತಂಡದಲ್ಲಿರುವ ಪ್ರಮುಖ ಐಪಿಎಸ್ ಅಧಿಕಾರಿಗಳು:
ಪ್ರಕರಣದ ತನಿಖೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ದಕ್ಷತೆಯಿಂದ ನಡೆಸುವ ಉದ್ದೇಶದಿಂದ ರಾಜ್ಯದ ಪ್ರಮುಖ ದಕ್ಷ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡವನ್ನು ರಚಿಸಲಾಗಿದೆ:
ಎನ್. ಶಶಿಕುಮಾರ್ (IGP) – ಎಸ್‌ಐಟಿ ಮುಖ್ಯಸ್ಥರು
ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ – ಮಂಗಳೂರು ನಗರ ಪೊಲೀಸ್ ಕಮಿಷನರ್ (ಸದಸ್ಯರು)
ನಿಶಾ ಜೇಮ್ಸ್ – ರಾಜ್ಯ ಗುಪ್ತವಾರ್ತೆ ವಿಭಾಗದ ಪೊಲೀಸ್ ಅಧೀಕ್ಷಕರು (SP) (ಸದಸ್ಯರು)
ಲೋಕೇಶ್ ಜಲಸಾಗರ್ – ಬೆಂಗಳೂರು ಸಿಐಡಿ (CID) ಪೊಲೀಸ್ ಅಧೀಕ್ಷಕರು (SP) (ಸದಸ್ಯರು)
ವೆಂಕಟೇಶ್ ಪ್ರಸನ್ನ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (Addl SP) (ಸದಸ್ಯರು)
ಮರು ತನಿಖೆಗೆ ಮುಹೂರ್ತ:
ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಹಾಗೂ ತನಿಖೆಯಲ್ಲಿ ಲೋಪಗಳಾಗಿವೆ ಎಂದು ಆರೋಪಿಸಿ ಮೃತರ ಕುಟುಂಬ ಹಾಗೂ ವಿವಿಧ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಸಮಗ್ರ ಮರು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ರಾಜ್ಯ ಸರ್ಕಾರ, ದಕ್ಷ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಿದ್ದು, ಶೀಘ್ರದಲ್ಲೇ ಈ ತಂಡ ಬೆಳ್ತಂಗಡಿಗೆ ಭೇಟಿ ನೀಡಿ ಮರು ತನಿಖೆಯನ್ನು ಅಧಿಕೃತವಾಗಿ ಆರಂಭಿಸಲಿದೆ. ಈ ನಿರ್ಧಾರದಿಂದ ಸೌಜನ್ಯ ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ನ್ಯಾಯ ಸಿಗುವ ಹೊಸ ಭರವಸೆ ಮೂಡಿದೆ.




