ಮಂಗಳೂರು: ಅತ್ಯಾಚಾರ ಮತ್ತು ಹತ್ಯೆಗೊಳಗಾದ ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಸೌಜನ್ಯಾಪರ ಹೋರಾಟಗಾರರು ನೋಟಾ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 11 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ.
ಆದರೂ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಯಾವುದೇ ಸಹಕಾರ ನೀಡಿಲ್ಲ. ಅಲ್ಲದೆ ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಪದ್ಮಲತಾ, ಆನೆ ಮಾವುತ, ವೇದವಲ್ಲಿ ಕೊಲೆ ಪ್ರಕರಣಗಳಿಗೂ ನ್ಯಾಯ ದೊರಕಬೇಕೆಂದು ಚುನಾವಣಾ ಆಯೋಗದ ನಿರ್ದೇಶನದಂತೆ ನೋಟಾ ಜನಜಾಗೃತಿ ಸಭೆಗಳನ್ನು ನಡೆಸಿ ಅತೀ ಹೆಚ್ಚು ನೋಟಾಕ್ಕೆ ಮತ ಬೀಳುವಂತೆ ಕರೆ ನೀಡಲಾಗುತ್ತದೆ.
ಇದಕ್ಕಾಗಿ ಸೌಜನ್ಯಾಪರ ಹೋರಾಟದ ರೂವಾರಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ನೋಟಾ ಅಭಿಯಾನ ನಡೆಸಲಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೋಟಾ ಮತ ಬೀಳವಂತೆ ಕರೆ ನೀಡಲಾಗುತ್ತದೆ. ಇದಕ್ಕಾಗಿ ಮನೆಮನೆಗಳಿಗೆ ತೆರಳಿ ನೋಟಾಕ್ಕೆ ಮತ ಹಾಕುವಂತೆ ವಿನಂತಿಸಲಾಗುತ್ತದೆ.
ಅಲ್ಲಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಎಪ್ರಿಲ್ 24ರಂದು ಸುಳ್ಯದಲ್ಲಿ ಲೋಕಸಭಾ ಕ್ಷೇತ್ರ ಮಟ್ಟದ ಬೃಹತ್ ನೋಟಾ ಜನಜಾಗೃತಿ ಸಭೆ ನಡೆಸಲಾಗುತ್ತದೆ. ರಾಷ್ಟ್ರೀಯ ಪಕ್ಷಗಳ ಹಾಗೂ ನ್ಯಾಯಾಂಗದ ಗಮನ ಸೆಳೆಯಲು ಈ ಅಭಿಯಾನ ನಡೆಸಲಾಗುತ್ತದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೋಟಾ ಮತ ಚಲಾವಣೆ ಆದರೆ ವ್ಯವಸ್ಥೆಯ ಗಮನ ಸೆಳೆಯಲು ಸಾಧ್ಯ ಎಂಬುದು ಹೋರಾಟಗಾರರ ಅಭಿಪ್ರಾಯ.