ಮಂಗಳೂರು: ರೈಲ್ವೆ ಕ್ರಾಸಿಂಗ್ ಗೇಟ್ಗಳಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ಕಠಿಣ ಕ್ರಮ ಕೈಗೊಂಡಿದೆ.ರಸ್ತೆ ಬಳಕೆದಾರರ ನಿರ್ಲಕ್ಷ್ಯದಿಂದಾಗಿ ರೈಲ್ವೆ ಕ್ರಾಸಿಂಗ್ಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. 2025 ಮತ್ತು 2026ನೇ ಸಾಲಿನಲ್ಲಿ ಒಟ್ಟು 79 ರೈಲ್ವೆ ಗೇಟ್ ಅಪಘಾತಗಳು ವರದಿಯಾಗಿವೆ (2025ರಲ್ಲಿ 55 ಪ್ರಕರಣಗಳು ಮತ್ತು 2026ರಲ್ಲಿ 24 ಪ್ರಕರಣಗಳು) ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಎಚ್ಚರಿಕೆ ಸಂಕೇತಗಳಿದ್ದರೂ ಅಥವಾ ಗೇಟ್ಗಳನ್ನು ಮುಚ್ಚಿದ್ದರೂ ವಾಹನ ಸವಾರರು ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿರುವುದು ಹೆಚ್ಚಿನ ಅಪಘಾತಗಳು ಸಂಭವಿಸಲು ಮುಖ್ಯ ಕಾರಣವಾಗಿದೆ. ಇಂತಹ ಬೇಜವಾಬ್ದಾರಿಯುತ ನಡವಳಿಕೆಯು ರಸ್ತೆ ಬಳಕೆದಾರರ ಜೀವಕ್ಕೆ ಅಪಾಯವನ್ನುಂಟು ಮಾಡುವುದಲ್ಲದೆ, ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಗೂ ಗಂಭೀರ ಬೆದರಿಕೆಯೊಡ್ಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಪದೇ ಪದೇ ನಡೆಯುತ್ತಿರುವ ಈ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಂಬಂಧಪಟ್ಟ ಅಧಿಕಾರಿಗಳು, ಆರು ಮಂದಿ ವಾಹನ ಚಾಲಕರ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿದ್ದಾರೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆ ಮತ್ತು ಶಿಸ್ತುಕ್ರಮದ ಹಂತದಲ್ಲಿವೆ.2025-26ನೇ ಆರ್ಥಿಕ ವರ್ಷದಲ್ಲಿ, ರೈಲ್ವೆ ಗೇಟ್ಗಳಿಗೆ ಡಿಕ್ಕಿ ಹೊಡೆದು ರೈಲ್ವೆ ಆಸ್ತಿಗೆ ಹಾನಿ ಮಾಡಿದ ಅಪರಾಧಿಗಳಿಂದ ಒಟ್ಟು 17,27,659 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪಾಲಕ್ಕಾಡ್ ವಿಭಾಗವು ತಿಳಿಸಿದೆ.ಅಲ್ಲದೆ, ಇಂತಹ ಘಟನೆಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




