ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪ್ರಯಾಣಿಕರ ಸುರಕ್ಷತೆ, ಮಕ್ಕಳ ರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
“ಜನ-ಜಾಗರಣ” ಅಭಿಯಾನದ ಅಂಗವಾಗಿ 18.06.2026 ರಂದು ಚಿಕ್ಕಜಾಜೂರು ರೈಲು ನಿಲ್ದಾಣದಲ್ಲಿ ಹಾಗೂ ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ ರೈಲಿನಲ್ಲಿ ಆರ್ಪಿಎಫ್ ಸಿಬ್ಬಂದಿ ಮತ್ತು ಸಿಗ್ನಲ್ ವಿಭಾಗದ ಸಿಬ್ಬಂದಿಗಳಿಂದ ಪ್ರಯಾಣಿಕರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು
ಈ ಸಂದರ್ಭದಲ್ಲಿ ಅಪರಿಚಿತರಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸದಂತೆ, ತಮ್ಮ ಸಾಮಾನು-ಸರಂಜಾಮುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹಾಗೂ ಸರ ಕಳವು ಮತ್ತು ಇತರ ಕಳ್ಳತನಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಪ್ರಯಾಣಿಕರಿಗೆ ತಿಳಿಸಲಾಯಿತು.
ಅದೇ ರೀತಿ ಫುಟ್ಬೋರ್ಡ್ನಲ್ಲಿ ಪ್ರಯಾಣಿಸುವುದು, ರೈಲು ಹಳಿಗಳನ್ನು ಅಕ್ರಮವಾಗಿ ದಾಟುವುದು ಹಾಗೂ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದರಿಂದ ಉಂಟಾಗುವ ಅಪಾಯಗಳ ಕುರಿತು ಅರಿವು ಮೂಡಿಸಲಾಯಿತು. ಯಾವುದೇ ಸಹಾಯ ಅಥವಾ ತುರ್ತು ಸಂದರ್ಭಗಳಲ್ಲಿ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಬಳಸುವಂತೆ ಸಲಹೆ ನೀಡಲಾಯಿತು.
ನನ್ಹೆ ಫರಿಶ್ತೆ – ಇಬ್ಬರು ಮಕ್ಕಳ ರಕ್ಷಣೆ
” ನನ್ಹೆ ಫರಿಶ್ತೆ ” ಯೋಜನೆಯಡಿ ಆರ್ಪಿಎಫ್ ಅರಸೀಕೆರೆ ತಂಡವು 21.06.2026 ರಂದು ರೈಲು ಸಂಖ್ಯೆ 17309ರಲ್ಲಿ ಯಾವುದೇ ಪ್ರಯಾಣದ ದಾಖಲೆಗಳಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಲಾಯಿತು.
ರೈಲು ಸಂಖ್ಯೆ 17309ರ ಎಸ್-8 ಬೋಗಿಯಲ್ಲಿ ಇಬ್ಬರು ಮಕ್ಕಳು ಪ್ರಯಾಣಿಸುತ್ತಿರುವ ಕುರಿತು ಮೈಸೂರು ವಿಭಾಗೀಯ ಭದ್ರತಾ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ತಕ್ಷಣ, ಅರಸೀಕೆರೆ ಆರ್ಪಿಎಫ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ರೈಲಿಗೆ ತೆರಳಿ ಮಕ್ಕಳನ್ನು ಸುರಕ್ಷಿತ ವಶಕ್ಕೆ ಪಡೆದರು.
ವಿಚಾರಣೆ ವೇಳೆ, 11 ಮತ್ತು 12 ವರ್ಷದ ಈ ಮಕ್ಕಳು ತುಮಕೂರಿನ ಶಾಲೆಯೊಂದರ ವಸತಿ ನಿಲಯದಲ್ಲಿ ವಾಸವಾಗಿದ್ದು, ಮೊಹರಂ ರಜೆ ಹಿನ್ನೆಲೆಯಲ್ಲಿ ತಮ್ಮ ಸಹಪಾಠಿಗಳು ಮನೆಗೆ ತೆರಳಿದ್ದರೂ ತಮ್ಮ ಪೋಷಕರು ಕರೆದುಕೊಂಡು ಹೋಗಲು ಬರದ ಕಾರಣ ಬೇಸರಗೊಂಡು ಶಾಲೆಯ ಕಾಂಪೌಂಡ್ ಗೋಡೆಯನ್ನು ಹಾರಿ ಹೊರಬಂದು ಹುಬ್ಬಳ್ಳಿಯ ಕಡೆಗೆ ಹೋಗುವ ಉದ್ದೇಶದಿಂದ ರೈಲು ಹತ್ತಿದ್ದಾಗಿ ತಿಳಿಸಿದರು.
ನಂತರ ಕಾನೂನು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿ, ಮಕ್ಕಳನ್ನು ಅರಸೀಕೆರೆ ಘಟಕದ ಮೂಲಕ ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ/ ಚೈಲ್ಡ್ಲೈನ್ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಹಾಗೂ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಮುಂದಿನ ಆರೈಕೆ, ಸಮಾಲೋಚನೆ ಹಾಗೂ ಪುನರ್ವಸತಿ ಕ್ರಮಗಳನ್ನು ಸಂಬಂಧಿತ ಇಲಾಖೆ ಕೈಗೊಳ್ಳಲಿದೆ.
ಆರ್ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಅನಾಹುತ ಅಥವಾ ಅಪಾಯ ಸಂಭವಿಸುವುದನ್ನು ತಡೆಯಲು ಸಾಧ್ಯವಾಯಿತು. ಪ್ರಯಾಣಿಕರ ಸುರಕ್ಷತೆ, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಮೈಸೂರು ವಿಭಾಗದ ಆರ್ಪಿಎಫ್ ನಿರಂತರವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ.




