ಪುತ್ತೂರು: ಬ್ಯಾಂಕ್ ಲೋನ್ ಇಎಂಐ (EMI) ಗೊಂದಲ ಬಗೆಹರಿಸುವ ನೆಪದಲ್ಲಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳರು, ಮಹಿಳೆಯೊಬ್ಬರ ಮೊಬೈಲ್ ಆ್ಯಪ್ ಮೂಲಕ ಬರೋಬ್ಬರಿ 2,92,000/- ರೂಪಾಯಿ ಹಣವನ್ನು ಲೂಟಿ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ವಂಚನೆಗೊಳಗಾದ 40 ವರ್ಷದ ಮಹಿಳೆಯೊಬ್ಬರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪಿರ್ಯಾದಿದಾರ ಮಹಿಳೆಯು ದಿನಾಂಕ 22-05-2026 ರಂದು ಪುತ್ತೂರಿನ ಕೋರ್ಟ್ ರೋಡ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಿಂದ ₹2,94,000/- ಚಿನ್ನದ ಸಾಲ (Gold Loan) ಪಡೆದಿದ್ದರು. ಜೂನ್ ತಿಂಗಳಿಂದ ಪ್ರತಿ ತಿಂಗಳು ₹6,000/- ಇಎಂಐ ಕಟ್ಟಾಗುವಂತೆ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಆದರೆ, ಲೋನ್ ಪಡೆದ ದಿನವೇ (ಮೇ 22) ಅವರ ಖಾತೆಯಿಂದ ₹6,000/- ಕಟ್ಟಾಗಿತ್ತು.
ಈ ತಪ್ಪಾಗಿ ಕಟ್ಟಾದ ಹಣವನ್ನು ವಾಪಸ್ ಪಡೆಯುವ ಸಲುವಾಗಿ ಮಹಿಳೆಯು ಗೂಗಲ್‌ನಲ್ಲಿ ಎಸ್‌ಬಿಐ ಕೋರ್ಟ್ ರೋಡ್ ಶಾಖೆಯ ಫೋನ್ ನಂಬರನ್ನು ಹುಡುಕಿ ಕರೆ ಮಾಡಿದ್ದರು. ಆದರೆ ಆ ಕಡೆಯಿಂದ ಕರೆ ಸ್ವೀಕರಿಸದ ಕಾರಣ ಅವರು ಫೋನ್ ಕಟ್ ಮಾಡಿದ್ದರು.
ಮ್ಯಾನೇಜರ್ ಸೋಗಿನಲ್ಲಿ ಬಂದ ಕರೆ:ಇದಾದ ಕೆಲವೇ ಹೊತ್ತಿನಲ್ಲಿ ಮಹಿಳೆಯ ಮೊಬೈಲ್‌ಗೆ 7908523108 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ತಾನು ಎಸ್‌ಬಿಐ ಕೋರ್ಟ್ ರೋಡ್ ಶಾಖೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಆತ, ಹಣ ರೀಫಂಡ್ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಇದಕ್ಕಾಗಿ ಆತ ಸೂಚಿಸಿದ ಲಿಂಕ್ ಅಥವಾ ಆ್ಯಪ್ ಮೂಲಕ ‘ಸ್ಕ್ರೀನ್ ಸ್ಟಾರ್ಟ್’ (Screen Share) ಬಟನ್ ಕ್ಲಿಕ್ ಮಾಡುವಂತೆ ತಿಳಿಸಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಇರಬೇಕೆಂದು ನಂಬಿದ ಮಹಿಳೆ ಅದಕ್ಕೆ ಒಪ್ಪಿಗೆ ನೀಡಿದ್ದಾರೆ.
ವಂಚಕನು ಮಹಿಳೆಯ ಮೊಬೈಲ್ ಸ್ಕ್ರೀನ್ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಂತೆ, ಮೊದಲ ಹಂತದಲ್ಲಿ ಫೋನ್ ಪೇ (PhonePe) ಮೂಲಕ ₹94,000/- ಹಣ ಕಟಾವಾಗಿದೆ. ಇದರಿಂದ ಮಹಿಳೆ ಗಾಬರಿಗೊಂಡಾಗ, “ಹಣ ವಾಪಸ್ ಬರಬೇಕಾದರೆ ತಕ್ಷಣ ಯೋನೋ ಎಸ್‌ಬಿಐ (Yono SBI) ಆ್ಯಪ್ ಓಪನ್ ಮಾಡಿ” ಎಂದು ಕರೆ ನಡೀತಿರುವಾಗಲೇ ನಂಬಿಸಿದ್ದಾನೆ. ಮಹಿಳೆ ಯೋನೋ ಆ್ಯಪ್ ಓಪನ್ ಮಾಡುತ್ತಿದ್ದಂತೆಯೇ ಅವರ ಖಾತೆಯಿಂದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ (IOB) ಕ್ರೆಡಿಟ್ ಕಾರ್ಡ್‌ಗೆ ಬರೋಬ್ಬರಿ ₹1,98,000/- ವರ್ಗಾವಣೆಯಾಗಿದೆ.
ಈ ರೀತಿಯಾಗಿ ಒಟ್ಟು ₹2,92,000/- ಹಣವನ್ನು ಅಪರಿಚಿತ ವ್ಯಕ್ತಿಗಳು ಮಹಿಳೆಯ ಖಾತೆಯಿಂದ ದೋಚಿ ವಂಚಿಸಿದ್ದಾರೆ. ಸದ್ಯ ಸಂತ್ರಸ್ತೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ವಿನಂತಿಸಿದ್ದಾರೆ.




