ಬಂಟ್ವಾಳ: ಇಲ್ಲಿನ ಕಡೇಶ್ವಾಲ್ಯದ ಅಮೈ ಎಂಬಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಂಬರ್ ತುಂಬಿದಿಕೊಂಡು ಬಂದಿದ್ದ ಟ್ಯಾಂಕರ್‌ಗಳಿಂದ ಅಕ್ರಮವಾಗಿ ಬೇರೆ ಟ್ಯಾಂಕರ್‌ಗಳಿಗೆ ಡಾಂಬರ್ ವರ್ಗಾಯಿಸುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದಾರೆ. ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಮಹಮ್ಮದ್ ಇಮ್ರಾನ್, ಅಶ್ರಫ್ ಎಂ., ವೀರೇಂದ್ರ ಎಸ್.ಆರ್., ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್, ಮಹಮ್ಮದ್ ನಿಸಾರ್, ಮಹಮ್ಮದ್ ಸಿಹಾಬುದ್ದೀನ್ ಬಂಧಿತ ಆರೋಪಿಗಳು. ಸೆನ್ ಹಾಗೂ ಅಪರಾಧ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ಟಿ ಮತ್ತು ಸಿಬ್ಬಂದಿ ಈ ದಾಳಿ ನಡೆಸಿ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಉಡುಪಿ ಮೂಲದ ವಿಜಯಕುಮಾರ್ ಶೆಟ್ಟಿ ಈ ಅಕ್ರಮ ಜಾಲದ ರೂವಾರಿ ಎನ್ನುವುದು ತಿಳಿದುಬಂದಿದೆ. ಆತನ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ ಎಂಬಾತನೊಂದಿಗೆ ಸೇರಿ ಈ ಕೃತ್ಯವನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಟ್ಯಾಂಕರ್ ನಿಂದ ಡಾಂಬರ್ ಅನ್ನು ಕಳುವುಗೈಯುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿದ್ದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರು ಟ್ಯಾಂಕರ್ ಲಾರಿಗಳನ್ನು, ಡಾಂಬರ್ ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ಒಂದು ತೂಕ ಮಾಪನ, ಗ್ಯಾಸ್ ಸಿಲಿಂಡರ್, ಕಬ್ಬಿಣದ ಟ್ಯಾಂಕ್ ಹಾಗೂ ಆರೋಪಿಗಳ 9 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.