ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಇಂದು ತಡರಾತ್ರಿಯಲ್ಲಿ ಪೊಲೀಸರು ಹೋರಾಟಗಾರರ ಮೇಲೆ ಮುಗಿಬಿದ್ದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ನೂರಕ್ಕೂ ಹೆಚ್ಚು ಮಂದಿ ಹೋರಾಟಗಾರರ ವಿಳಾಸ ಹಿಡಿದು ಮನೆಮನೆಗೆ ನುಗ್ಗಿ ನೊಟೀಸ್ ನೀಡತೊಡಗಿದ್ದಾರೆ. ಹೋರಾಟಗಾರರು ಎರಡು ಲಕ್ಷದ ಬಾಂಡ್ ನೊಂದಿಗೆ, ಸರ್ಕಾರಿ ಜಾಮೀನಿನೊಂದಿಗೆ ನಾಳೆ ಬೆಳಿಗ್ಗೆ ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.
ಈ ಹೋರಾಟಕ್ಕೆ ಬಿಜೆಪಿಯೇತರ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡಿದ್ದವು. ದಿನ ಕಳೆದಂತೆ ಈ ಟೋಲ್ ವಿರೋಧಿ ಹೋರಾಟವು ಆಳುವ ಬಿಜೆಪಿ ಸರ್ಕಾರವ ಮೇಲೆ ಒತ್ತಡ ತರುತ್ತಿದ್ದಂತೆ ಹೋರಾಟವನ್ನೇ ಬಗ್ಗುಬಡಿಯುವ ಸರ್ವಾಧಿಕಾರಿ ಧೋರಣೆಯನ್ನು ಮಂಗಳೂರು ಪೊಲೀಸರು ತೋರುತ್ತಿದ್ದಾರೆ. ರಾತ್ರೋರಾತ್ರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ಮಹಿಳಾ ಹೋರಾಟಗಾರರ ಮನೆಗೂ ಮಧ್ಯರಾತ್ರಿ ತೆರಳಿ ನೋಟೀಸ್ ನೀಡಿದ್ದಾರೆ. ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೂ ಮಧ್ಯರಾತ್ರಿ ಹನ್ನೆರಡು ಗಂಟೆಯಲ್ಲಿ ಹೋಗಿರುವುದು ತಿಳಿದು ಬಂದಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಸುವ ಪೊಲೀಸರ ಈ ದಮನಕಾಂಡದ ಕುರಿತು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ʼಪೊಲೀಸರ ಬೆದರಿಕೆಗೆ ನಾವು ಅಂಜುವುದಿಲ್ಲ. ತುಳುನಾಡ ಜನರು ಎಚ್ಚತ್ತಿದ್ದಾರೆ. ಟೋಲ್ ವಿರೋಧಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲʼ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ “ಗಂಡಸು” ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ” ಎಂದು ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.