ಕಾರವಾರ:ಕಾರು ಕೊಡಿಸುವುದಾಗಿ ನಂಬಿಸಿ ,ಗುತ್ತಿಗೆದಾರನಿಂದ 5.5 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಲ್ಲಾಪುರ ತಾಲೂಕಿನ ಗುಳ್ಳಾಪುರ ನಿವಾಸಿ ಶಿವಕುಮಾರ ಮುರಗೇಶ ಗೌಂಡರ (33) ವಂಚಿಸಿದ ಆರೋಪಿಯಾಗಿದ್ದಾನೆ.
ಹಳೇ ದಾಂಡೇಲಿಯ ಲಕ್ಷ್ಮಿ ಚಾಳ ನಿವಾಸಿ, ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿರುವ 27 ವರ್ಷದ ಗೋಪಾಲ್ಸಿಂಗ್ ಸುಧೀರ್ಸಿಂಗ್ ರಜಪೂತ ಹಣ ಕಳೆದುಕೊಂಡವ.
ಆರೋಪಿ ಶಿವಕುಮಾರ್ ಗೌಂಡರ್ , ಗುತ್ತಿಗೆದಾರ ಗೋಪಾಲ್ಸಿಂಗ್ ಗೆ ಸೋವಿ ರೇಟಿನಲ್ಲಿ ಕಾರು ಕೊಡಿಸುವುದಾಗಿ ನಂಬಿಸಿದ್ದ ಎನ್ನಲಾಗಿದೆ.ಮಾತು ನಂಬಿದ ಗೋಪಾಲ್ಸಿಂಗ್, ದಿನಾಂಕ 16 ಜುಲೈ 2025 ರಂದು ಫೋನ್ಪೇ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 5,05,000 ರೂಪಾಯಿಗಳನ್ನು ಆರೋಪಿಗೆ ಪಾವತಿಸಿದ್ದರು.
ಹಣ ಪಡೆದ ನಂತರ ಆರೋಪಿ ಶಿವಕುಮಾರ್, ಬೇರಾರಿಗೋ ಸೇರಿದ ಕಪ್ಪು ಬಣ್ಣದ ಕ್ರೆಟಾ (Creta) ಕಾರನ್ನು (ನೋಂದಣಿ ಸಂಖ್ಯೆ: KA 19 MF 4585) ತಂದು ಗೋಪಾಲ್ಸಿಂಗ್ಗೆ ನೀಡಿದ್ದ. ಅಲ್ಲದೆ, ಇನ್ನು 2 ದಿನಗಳಲ್ಲಿ ಕಾರಿನ ಅಧಿಕೃತ ಕಾಗದಪತ್ರಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ, ಕೆಲ ದಿನಗಳ ಬಳಿಕ ಕಾರಿನ ಅಸಲಿ ಮಾಲೀಕರು ಬಂದು ತಮ್ಮ ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.
ಆ ಬಳಿಕ ಆರೋಪಿ ಶಿವಕುಮಾರ್, ಕಾಂಟ್ರಾಕ್ಟರ್ಗೆ ಬೇರೆ ಕಾರನ್ನೂ ಕೊಡದೆ ಹಾಗೂ ಪಡೆದುಕೊಂಡಿದ್ದ 5,05,000 ರೂ. ಹಣವನ್ನೂ ಹಿಂದಿರುಗಿಸದೆ ಉದ್ದೇಶಪೂರ್ವಕವಾಗಿ ವಂಚನೆ ಎಸಗಿದ್ದಾನೆ.
ಹಣ ಕೊಟ್ಟು ಮೋಸ ಹೋದ ಬಗ್ಗೆ ಗೋಪಾಲ್ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 318 (4) ರ ಅಡಿಯಲ್ಲಿ (ಅಪರಾಧ ಕ್ರಮಾಂಕ: 141/2026) ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.




