ಮಂಗಳೂರು : ಕಳೆದೆರಡು ದಿನಗಳಿಂದ ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ತಾಲೂಕಿನ ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಬುಧವಾರ (ಜುಲೈ 01) ಭೀಕರ ಅವಘಡವೊಂದು ಸಂಭವಿಸಿದೆ. ಗುಡ್ಡದ ತುತ್ತ ತುದಿಯಲ್ಲಿದ್ದ ಖಾಸಗಿ ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ (ಕಾಂಪೌಂಡ್ ವಾಲ್) ತಳಭಾಗದಲ್ಲಿದ್ದ ವಾಸದ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ, ಮನೆಯಲ್ಲಿದ್ದ ಕುಟುಂಬಸ್ಥರು ವಾರದ ಹಿಂದಷ್ಟೇ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದರಿಂದ ದೊಡ್ಡದೊಂದು ದುರಂತ ತಪ್ಪಿದೆ
ಇಲ್ಲಿನ ನಿವಾಸಿ ಕಿಶೋರ್ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ಹಾನಿಗೀಡಾದ ಕಟ್ಟಡವಾಗಿದೆ. ಕೆರೆಬೈಲು ಗುಡ್ಡೆ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಗುಡ್ಡದ ತುದಿಯಲ್ಲಿ ಮಂಗಳೂರು ಮೂಲದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಸೇರಿದ ಗೆಸ್ಟ್ ಹೌಸ್ ಇದೆ. ಇದರ ಅವೈಜ್ಞಾನಿಕ ಆವರಣ ಗೋಡೆಯೇ ಇಂದಿನ ದುರಂತಕ್ಕೆ ಕಾರಣ ಎನ್ನಲಾಗಿದೆ




