ಕೇರಳ(Kerala) ದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ, ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಲಿದೆ.
ಮೊದಲ ಹಂತದ ಅಡಿಯಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಸಂಪೂರ್ಣ ಹಳಿಯನ್ನು ಗಂಟೆಗೆ 110 ಕಿ.ಮೀ ವೇಗಕ್ಕೆ ಪರಿವರ್ತಿಸಲು 381 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
ತಿರುವುಗಳನ್ನು ನೇರಗೊಳಿಸುವುದು ಮತ್ತು ಇತರ ಅಗತ್ಯ ಹೊಂದಾಣಿಕೆಗಳನ್ನು ಒಳಗೊಂಡಿರುವ ಎರಡನೇ ಹಂತವು ಪೂರ್ಣಗೊಳ್ಳಲು ಎರಡರಿಂದ ಮೂರೂವರೆ ವರ್ಷ ಬೇಕಾಗುತ್ತದೆ. ಬಳಿಕ ಈ ಟ್ರ್ಯಾಕ್‌ನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ.
ಏಪ್ರಿಲ್ 17 ರಂದು ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು, ತಿರುವನಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 5:10ಕ್ಕೆ ಆರಂಭವಾದ ಪ್ರಾಯೋಗಿಕ ರೈಲು ಓಡಾಟ ಮಧ್ಯಾಹ್ನ 12:30ಕ್ಕೆ ಕಣ್ಣೂರು ತಲುಪಿತ್ತು.
ಆರಂಭಿಕ ಹಂತದಲ್ಲಿ, ವಂದೇ ಭಾರತ್ ಗಂಟೆಗೆ ಕೇವಲ 100 ಕಿಮೀ ವೇಗದಲ್ಲಿ ಪ್ರಯಾಣಿಸಲಿದೆ. ಒಂದು ವರ್ಷದ ಅವಧಿಯಲ್ಲಿ ವಂದೇ ಭಾರತ್ 130 ಕಿಮೀ ವೇಗದಲ್ಲಿ ಓಡಲಿದೆ. ವೇಗದ ಗುರಿಗಳನ್ನು ತಲುಪಲು ರೈಲುಗೆ ಅನುಕೂಲವಾಗುವಂತೆ ಟ್ರ್ಯಾಕ್ ಜೋಡಣೆ ಸಮೀಕ್ಷೆಯು ಸಮಾನಾಂತರವಾಗಿ ನಡೆಯುತ್ತದೆ. ಈ ರೈಲಿನಲ್ಲಿ ಆರಂಭಿಕ ಸವಾರಿಗಾಗಿ 25 ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ.