ಮಂಗಳೂರು: ಕರಾವಳಿಯ ಪ್ರತಿಭಾವಂತ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಹಾಸ್ಯ ಮತ್ತು ಹಾರರ್ ಕಥಾಹಂದರದ ಕನ್ನಡ ಸಿನಿಮಾ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಶ್ರೀ ವಾರಾಹಿ ಫಿಲಂಸ್ ಲಾಂಛನದಲ್ಲಿ ಉದ್ಯಮಿ ಸಂತೋಷ್ ವಿ. ನಿರ್ಮಿಸಿರುವ ಈ ಚಿತ್ರಕ್ಕೆ ಚಯನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಹಾಗೂ ಟ್ರೈಲರ್‌ಗೆ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, “‘ಮ್ಯಾರೇಜ್ ಪಾರ್ಟಿ’ ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರೇಕ್ಷಕರ ಪ್ರೀತಿಯೊಂದಿಗೆ ಡಿಸೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ” ಎಂದು ತಿಳಿಸಿದರು.
ನಟ ನವೀನ್ ಡಿ. ಪಡೀಲ್ ಮಾತನಾಡಿ, ಕರಾವಳಿಯ ಸೊಬಗು, ಸಂಸ್ಕೃತಿ ಹಾಗೂ ಪ್ರತಿಭಾವಂತ ಕಲಾವಿದರನ್ನು ಸಿನಿಮಾದ ಮೂಲಕ ಇಡೀ ರಾಜ್ಯಕ್ಕೆ ಪರಿಚಯಿಸುವ ನಿರ್ಮಾಪಕ ಮತ್ತು ನಿರ್ದೇಶಕರ ಪ್ರಯತ್ನ ಶ್ಲಾಘನೀಯ ಎಂದರು. ನಟ ವಿನೀತ್ ಕುಮಾರ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಚಿತ್ರದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾನಾಜೆ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ಅನನ್ಯ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿ ಭಾಗದ ಹಲವು ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಸಂತೋಷ್ ವಿ., ಭೀಮ್ ರಾವ್, ಜ್ಯೋತಿಷ್ ಶೆಟ್ಟಿ, ಅನನ್ಯ, ರಾಘವೇಂದ್ರ, ಪ್ರವೀಣ್, ರಘು ಪಾಂಡೇಶ್ವರ, ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




