ಸುಬ್ರಹ್ಮಣ್ಯ: ನಾಗರ ಪಂಚಮಿ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಪುಣ್ಯ ಪುರಾಣ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಭಕ್ತರನ್ನು ವಂಚಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋವೊಂದರ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ನಾಗರ ಪಂಚಮಿ ಹಿನ್ನೆಲೆಯಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ, ₹750 ಮುಂಗಡ ಹಣ ಪಾವತಿಸಿದರೆ ದೇವಸ್ಥಾನದ ಸೇವೆ ನೆರವೇರಿಸಿ ಪ್ರಸಾದವನ್ನು ಭಕ್ತರ ಮನೆಗೆ ಕಳುಹಿಸಿಕೊಡಲಾಗುವುದು ಎಂಬ ಸಂದೇಶ ನೀಡಲಾಗಿದೆ. ಈ ವಿಡಿಯೋವನ್ನು ನಂಬಿ ಭಕ್ತರು ಹಣ ಕಳೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಎಚ್ಚರಿಕೆಯ ಮಾಹಿತಿ ರವಾನಿಸಿದೆ.
ನಕಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರಿಂದ ಹಣ ಪಡೆಯಲು ಯತ್ನಿಸಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೇಶ-ವಿದೇಶಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಕುಕ್ಕೆ ಕ್ಷೇತ್ರದ ಹೆಸರಿನಲ್ಲಿ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಯತ್ನಿಸಿರುವ ಘಟನೆಗಳು ನಡೆದಿವೆ. ಹೀಗಾಗಿ, ಇಂತಹ ನಕಲಿ ಜಾಹೀರಾತು ಹಾಗೂ ವಿಡಿಯೋಗಳಿಗೆ ಭಕ್ತರು ಮರುಳಾಗದಂತೆ ದೇವಸ್ಥಾನದ ಆಡಳಿತ ಮನವಿ ಮಾಡಿದೆ. ದೇವಸ್ಥಾನದ ಅಧಿಕೃತ ಮೂಲಗಳಿಂದ ಮಾಹಿತಿ ಪಡೆಯದೆ ಯಾವುದೇ ಅಪರಿಚಿತ ಮೊಬೈಲ್ ಸಂಖ್ಯೆ, ಸಾಮಾಜಿಕ ಜಾಲತಾಣದ ಲಿಂಕ್ ಅಥವಾ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹಾಗೂ ಸ್ಥಳೀಯ ವಸತಿಗೃಹದ ಮಾಹಿತಿಯನ್ನು ಬಳಸಿಕೊಂಡು ಭಕ್ತರನ್ನು ನಂಬಿಸಿ ವಂಚನೆ ಮಾಡಿರುವ ಆರೋಪದಡಿ ದೂರು ದಾಖಲಾಗಿತ್ತು. ಭಕ್ತರೊಬ್ಬರು ಆನ್ಲೈನ್ನಲ್ಲಿ ಕೊಠಡಿ ಬುಕ್ಕಿಂಗ್ ಮಾಡಿದ್ದರು. ಹಣ ಪಾವತಿಸಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹೊಂದಿರುವ ‘ಅನಘ ಗೆಸ್ಟ್ ಹೌಸ್, ನಿಯರ್ ಆದಿ ಸುಬ್ರಹ್ಮಣ್ಯ ಟೆಂಪಲ್’ ಎಂಬ ವಿವರಗಳಿರುವ ಬಿಲ್ವೊಂದನ್ನು ವಂಚಕರು ಕಳುಹಿಸಿದ್ದರು. ಆದರೆ ಬಳಿಕ ನಿಜವಾದ ವಸತಿಗೃಹದಲ್ಲಿ ವಿಚಾರಿಸಿದಾಗ ಯಾವುದೇ ಕೊಠಡಿ ಬುಕ್ಕಿಂಗ್ ಆಗಿಲ್ಲ ಎಂಬುದು ತಿಳಿದುಬಂದಿತ್ತು.
ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತರು ವಸತಿಗೃಹದ ಅಧಿಕೃತ ಸಂಪರ್ಕ ಸಂಖ್ಯೆ ಮೂಲಕ ನೇರವಾಗಿ ಸಂಪರ್ಕಿಸಿ ಕೊಠಡಿ ಬುಕ್ಕಿಂಗ್ ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿಸುವುದು ಸುರಕ್ಷಿತ. ಅನುಮಾನಾಸ್ಪದ ವೆಬ್ಸೈಟ್ ಅಥವಾ ಆನ್ಲೈನ್ ವಂಚನೆಗೆ ಒಳಗಾದರೆ ತಕ್ಷಣವೇ ಬ್ಯಾಂಕ್ಗೆ ಮಾಹಿತಿ ನೀಡಿ, ಸಂಬಂಧಪಟ್ಟ ಸೈಬರ್ ಕ್ರೈಂ ವಿಭಾಗ ಅಥವಾ ಪೊಲೀಸರಿಗೆ ದೂರು ನೀಡಬೇಕು ಎಂದು ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ಸೂಚನೆ ನೀಡಲಾಗಿದೆ.




