ಮಂಗಳೂರು: ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಆ.3 ರಿಂದ 5ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, “ರೆಡ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಭಾರೀ ಗಾಳಿ-ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ. ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಸುಬ್ರಹ್ಮಣ್ಯದಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾಗಿದ್ದು, 283.5 ಮಿ.ಮೀ. ಮಳೆಯಾಗಿದೆ. ಸಂಪಾಜೆಯಲ್ಲಿ 140 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 48.3 ಮಿ.ಮೀ., ಬಂಟ್ವಾಳ 37.8, ಮಂಗಳೂರು 42.4, ಪುತ್ತೂರು 38.7, ಸುಳ್ಯ 140.8 ಮಿ.ಮೀ., ಮೂಡುಬಿದಿರೆ 34.7, ಕಡಬ 99.3 ಮಿ.ಮೀ. ಮಳೆಯಾಗಿದೆ.
Author: main-admin
ಕಡಬ: ವಿವಾಹಿತ ಯುವತಿಯೋರ್ವಳನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇ.20 ರಂದು ರಾತ್ರಿ 10 ಗಂಟೆಗೆ ಪವನ್ ಎಂಬಾತ ಮದ್ಯಪಾನ ಮಾಡಿಕೊಂಡು ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಬಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ತಿಳಿಸಿದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ಪೊಲೀಸ್ ಕಂಪ್ಲೇಟ್ ಮಾಡಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದನು. ಜೊತೆಗೆ ಇದಕ್ಕಾಗಿ ಯುವತಿಯ ಕೈಯಿಂದ 1,70,000 ರೂಪಾಯಿ ಹಣವನ್ನು ಪಡೆದುಕೊಂಡು ಈಗ ಮದುವೆಯಾಗುವುದಿಲ್ಲ ಎಂದು ವಂಚನೆ ಮಾಡಿದ್ದಾಗಿ ಯುವತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅದರನ್ವಯ ಯುವಕನ ಮೇಲೆ ಪ್ರಕರಣ ದಾಖಲಾಗಿದೆ.
ಉಳ್ಳಾಲ; ಉಳ್ಳಾಲದಲ್ಲಿ ಯಾವುದೇ ತಲವಾರು ದಾಳಿ ಯತ್ನ ನಡೆದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾರೂ ವದಂತಿ ಹಬ್ಬಿಸಬೇಡಿ, ವದಂತಿ ಮಾಡಿದವನ ವಿಚಾರಣೆ ನಡೆದಿದೆ. ಆತನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ವ್ಯಕ್ತಿಯೋರ್ವ ತನ್ನನ್ನು ಬೆನ್ನು ಹಟ್ಟಿ ತಲವಾರು ದಾಳಿ ನಡೆಸಲು ಯತ್ನಿಸಿದ್ದಾನೆ ಎಂಬ ವದಂತಿ ಹಬ್ಬಿಸಿದ್ದ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ವದಂತಿ ನಡೆದಿದೆ. ಉಚ್ಚಿಲ ನಿವಾಸಿ ಕಿಶೋರ್ ಎಂಬಾತ ಈ ರೀತಿ ವದಂತಿ ಹಬ್ಬಿಸಿದಾತ. ಈತ ಇಂದು ಬೆಳಗ್ಗೆ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ತನ್ನನ್ನು ಯಾರೋ ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ.ಈ ಬಗ್ಗೆ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಕುದ್ದು ವಿಚಾರಣೆ ನಡೆಸಿದ್ದು, ಇದೀಗ ಘಟನೆ ಸುಳ್ಳು ಎಂದು ಹೇಳಿದ್ದಾರೆ.
ಸುಳ್ಯ; ಭಾರೀ ಮಳೆ ಹಿನ್ನೆಲೆ ಉಂಟಾದ ಪ್ರವಾಹದ ನೀರಿಗೆ ಬಿದ್ದ ಯುವಕನನ್ನು ಜೀವದ ಹಂಗು ತೊರೆದು ರಕ್ಷಿಸಿ ವ್ಯಕ್ತಿಯೋರ್ವರು ಸುದ್ದಿಯಾಗಿದ್ದಾರೆ. ಶರೀಫ್ ಎಂಬಾತನನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆದಿದ್ದು, ಕಳೆದ ಕೆಲ ದಿನಗಳಿಂದ ಅಹಿತಕರ ಘಟನೆಗೆ ಸಾಕ್ಷಿಯಾಗಿದ್ದ ಕರಾವಳಿಯಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರಲಾಗಿದೆ. ಸುಳ್ಯ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಮುಂದುವರೆದಿದ್ದು, ಸುಬ್ರಹ್ಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಎಂಬಲ್ಲಿ ಪ್ರವಾಹದ ನೀರಿನಲ್ಲಿ ಬಂದು ಹರಿಹರಪಳ್ಳತ್ತಡ್ಕ ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ತೆರವುಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಕ್ರೇನ್ ಆಪರೇಟರ್ ಶರೀಫ್ ನಿಯಂತ್ರಣ ತಪ್ಪಿ ಪ್ರವಾಹದ ನೀರಿಗೆ ಬಿದ್ದಿದ್ದಾನೆ. ತಕ್ಷಣವೇ ನದಿಗೆ ಹಾರಿ ಶರೀಫ್ ಅವರನ್ನು ಸೋಮಶೇಖರ್ ಕಟ್ಟೆಮನೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು: ಅಹಿತಕರ ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇನ್ನೂ 2 ದಿನಗಳ ಕಾಲ ರಾತ್ರಿ ನಿರ್ಬಂಧವನ್ನು ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ನೂತನ ಆದೇಶದ ಹಿನ್ನಲೆಯಲ್ಲಿ ಆ.5ರ ಬೆಳಗ್ಗೆ 6ವರೆಗೆ ನಿರ್ಬಂಧ ಮುಂದುವರಿಯಲಿದೆ. ಇತ್ತೀಚಿಗೆ ಬೆಳ್ಳಾರೆ ಮತ್ತು ಸುರತ್ಕಲ್‌ನಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಂಜೆ 6ರಿಂದ ಮುಂಜಾನೆ 6ರವರೆಗೆ ತುರ್ತು ಸೇವೆಯನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಇದರ ಜೊತೆಗೆ ಆ.6ರ ತನಕ ಜಿಲ್ಲೆಯಲ್ಲಿ ನಿಷೇಧಾಜ್ಞೆಯೂ ಜಾರಿಯಲ್ಲಿದೆ.
ಸುರತ್ಕಲ್; ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು ಈ ಬಗ್ಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಶಶಿಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ಬಂಧನವಾಗಿದೆ ಎಂದು ಹೇಳಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಶ್ರೀನಿವಾಸ್ ಕಾಟಿಪಳ್ಳ (23), ಅಭಿಷೇಕ್ (23) ದೀಕ್ಷಿತ್ ಕಾಟಿಪಳ್ಳ (21), ಸುಹಾಸ್ ( 29), ಮೋಹನ್ (23) ಮತ್ತು ಗಿರೀಶ್ (27) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಜಪೆಯ ಸುಹಾಸ್ ಶೆಟ್ಟಿ ಎಂಬಾತ ಅಭಿಷೇಕ್ ಮೂಲಕ ಹತ್ಯೆಗೆ ಮೊದಲು ಸ್ಕೆಚ್ ಹಾಕಿದ್ದಾರೆ. ಜುಲೈ 27ರಂದು ಸುರತ್ಕಲ್‌ನ ಒಂದು ಜಾಗದಲ್ಲಿ ಅಭಿಷೇಕ್, ಶ್ರೀನಿವಾಸ ಹಾಗೂ ಉಳಿದವರನ್ನ ಸೇರಿಸಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಡೀಲ್ ಮಾಡಿ ತರುತ್ತಾರೆ ಎಂದರು.ಜುಲೈ…
ಉಡುಪಿ :ಪರ್ಕಳ ಇಲ್ಲಿನ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಪಕ್ಕದಲ್ಲಿ ಬೃಹತ್ ಗಾತ್ರದ ನೀರಿನ ಟಾಂಕಿ ಯೊಂದು ಪಕ್ಕದಲ್ಲಿರುವ ಪರ್ಕಳ ಎಜುಕೇಶನ್ ಸೊಸೈಟಿಯ ಜಾಗದೊಳಗೆ ಧರೆಗುಳಿದು ಮಗುಚಿ ಬಿದ್ದಿದೆ. ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ ಹಳೆಯದಾದ ನೀರಿನ ಟ್ಯಾಂಕ್ ಇದಾಗಿದ್ದು, ಪಕ್ಕದಲ್ಲಿ 80ನೇ ಬಡಗಬೆಟ್ಟಿಗೆ ಸಂಚರಿಸುವ ರಸ್ತೆ ಜನನಿ ಬಿಡ ಪ್ರದೇಶವಾಗಿದ್ದು, ಆಯತಪ್ಪಿ ರಸ್ತೆಗೆ ಬಿದ್ದರೆ ಅನಾಹುತ ತುಂಬಾ ಆಗುತ್ತಿತ್ತು.. ಹಾಗೆ ಪರ್ಕಳ ಎಜುಕೇಶನ್ ಸೊಸೈಟಿಯ ಈ ಜಾಗದಲ್ಲಿ ಹಿಂದೆ ಅಂಗನವಾಡಿಯು ಕೂಡ ಇತ್ತು,, ಇದೀಗ ಮುಚ್ಚಲ್ಪಟ್ಟಿದೆ ಸದ್ಯ ಇಲ್ಲಿ ಇರುವ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣ ಹಾನಿ ಸಂಭವಿಸಿಲ್ಲ.
ಸುಬ್ರಹ್ಮಣ್ಯ: ಭಾರೀ ಮಳೆ ಸುರಿಯುತ್ತಿರುವ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಪರ್ವತಮುಖಿ ನಿವಾಸಿ ಮೂಲತಃ ಪಂಜದ ಕರಿಮಜಲು ಕುಸುಮಾಧರ ಅವರ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಕೊಂಡಿದ್ದರು. ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು, ಮಕ್ಕಳು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮನೆಯಲ್ಲಿ ಒಟ್ಟು ಐವರು ಇರುತ್ತಿದ್ದರು. ಘಟನೆ ನಡೆದ ಸಂದರ್ಭ ತಂದೆ ಅಂಗಡಿಗೆ ಹೋಗಿದ್ದರು. ತಾಯಿ ರೂಪಾಶ್ರೀ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರು.
ಭಟ್ಕಳ: ಮಂಗಳವಾರ ಬೆಳಿಗ್ಗೆ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಅವಶೇಷಗಳಡಿ ನಾಲ್ವರು ಸಿಲುಕಿಕೊಂಡಿರುವ ಘಟನೆ ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿದ್ದ ನಾರಾಯಣ ನಾಯ್ಕ (48), ಅವರ ಪುತ್ರಿ ಲಕ್ಷ್ಮಿ ನಾಯ್ಕ (33), ಪುತ್ರ ಅನಂತ ನಾರಾಯಣ ನಾಯ್ಕ (32) ಹಾಗೂ ಸಂಬಂಧಿ ಪ್ರವೀಣ ಬಾಲಕೃಷ್ಣ ನಾಯ್ಕ (20) ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ಚಿರೆಕಲ್ಲು ಮಿಶ್ರಿತ ಮಣ್ಣು ಮನೆಯ ಮೇಲೆ ಕುಸಿದಿದ್ದು, ಮನೆ ಸಂಪೂರ್ಣ ನಾಶವಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
ದ.ಕ ಜಿಲ್ಲೆಯ ವಿವಿಧ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಸುಬ್ರಹ್ಮಣ್ಯ ಕಲ್ಮಕಾರು , ಕೊಲ್ಲ ಮೊಗ್ರು , ಹರಿಹರ , ಬಾಳುಗೋಡು ಐನಕಿದು ಗ್ರಾಮದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಜಳಪ್ರಳಯವೇ ಸಂಭವಿಸಿದೆ. ಭಾರೀ ಮಳೆ ಮುಂದುವರಿದಿದ್ದು, ನದಿ , ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸುಳ್ಯ ಹಾಗೂ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜು ಗಳಿಗೆ ಆ. 2 ರಂದು ಜಿಲ್ಲಾಧಿಕಾರಿ ಡಾ. ಕೆವಿ . ರಾಜೇಂದ್ರ ರಜೆ ಘೋಷಣೆ ಮಾಡಿದ್ದಾರೆ.ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದ್ದು, ಭಾರೀ ಮಳೆಯಿಂದ ದರ್ಪಣ ತೀರ್ಥ ನದಿ, ಆದಿ ಸುಬ್ರಹ್ಮಣ್ಯ ಕ್ಷೇತ್ರದ ಒಳಗೆ ಪ್ರವೇಶಿತು.ಮಳೆಯ ಭೀಕರತೆಗೆ ಕಲ್ಮಕಾರು , ಕೊಲ್ಲ ಮೊಗ್ರು , ಹರಿಹರ , ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.