ಮಂಗಳೂರು: ಜೀವಬೆದರಿಕೆ ಇದ್ದ ಹಿನ್ನೆಲೆ ಹಿಂದುತ್ವ ಹೋರಾಟಗಾರ ಸತ್ಯಜಿತ್ ಸುರತ್ಕಲ್, ವಿಚಾರವಾದಿ ನರೇಂದ್ರ ನಾಯಕ್ ಜೊತೆ ಬಿಜೆಪಿ ಮುಖಂಡರುಗಳಾದ ರಹೀಂ ಉಚ್ಚಿಲ್ ಹಾಗೂ ಜಗದೀಶ್ ಶೇಣವ ಅವರಿಗೆ ಸರಕಾರ ನೀಡಿದ್ದ ಪೊಲೀಸ್ ಭದ್ರತಾ ಸಿಬ್ಬಂದಿ ಸೇವೆಯನ್ನು ಹಿಂಪಡೆಯಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ 2006ರಲ್ಲೇ ಹಿಂದುತ್ವ ಹೋರಾಟಗಾರ ಸತ್ಯಜಿತ್ ಸುರತ್ಕಲ್‌ಗೆ ಅಂದಿನ ಕಾಂಗ್ರೆಸ್ ಸರಕಾರ ಭದ್ರತೆ ನೀಡಿತ್ತು. ಅದಾದ ನಂತರದ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡ ರಹೀಂ ಉಚ್ಚಿಲ್, ಜಗದೀಶ್ ಶೇಣವ ಹಾಗೂ ವಿಚಾರವಾದಿ ನರೇಂದ್ರ ನಾಯಕ್ ಅವರಿಗೆ ಸರಕಾರ ಭದ್ರತೆ ನೀಡಿತ್ತು. ಇದೀಗ ನೀಡಿದ್ದ ಭದ್ರತೆಯನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ.
Author: main-admin
ಬಂಟ್ವಾಳ: ಶಂಕಿತ ರೇಬಿಸ್‌ಗೆ ಯುವಕನೋರ್ವ ಬಲಿಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಅಶೋಕ ಹೆಗ್ಡೆ ಎಂಬವರ ಪುತ್ರ ಪ್ರಶಾಂತ ಹೆಗ್ಡೆ(31) ಮೃತ ಯುವಕ.ಮೂರು ತಿಂಗಳ ಹಿಂದೆ ಪ್ರಶಾಂತ್ ಅವರಿಗೆ ಅವರ ಮನೆಯ ಸಾಕು ನಾಯಿ ಕಚ್ಚಿದ್ದು, ಬಳಿಕ ನಾಯಿ ಮೃತ ಪಟ್ಟಿತ್ತು. ಆದರೆ ಪ್ರಶಾಂತ್ ಅವರು ನಾಯಿ ಕಚ್ಚಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಬಳಿಕ ತೀವ್ರ ಸಂಕಟ, ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾರೆ.ಇನ್ನು ಜ್ವರ ತಪಾಸಣೆ ನಡೆಸಿದ ಸಂದರ್ಭ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ.ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು. ಆದರೆ ಅವರು ಯಾವ ಕಾರಣದಿಂದ ಮೃತರಾಗಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ತಿಳಿಸಿದ್ದಾರೆ.
ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಗುಂಡ್ಯ ಎಂಬಲ್ಲಿ ಎ.2ರ ಬೆಳಗ್ಗೆ ರಸ್ತೆಯ ಬದಿಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಲಾರಿಯೊಂದು ಚಲಾಯಿಸಿ ಸಾರಿ ಸಮೇತ ಚಾಲಕ ಪರಾರಿಯಾದ ಕೆಲವೇ ಕ್ಷಣದಲ್ಲಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕೇರಳದ ಪೊನ್ನಪ್ಪನ್(ವ.50) ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿಯು ಮೂಲತಃ ಕೇರಳದವನಾಗಿದ್ದು, ಕಳೆದ 15 ವರ್ಷದಿಂದ ಗುಂಡ್ಯ ಪರಿಸರದಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ರಸ್ತೆಯ ಬದಿಯಲ್ಲಿ ಮಲಗುತ್ತಿದ್ದ.ವಿಷಯ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್ ನೇತೃತ್ವದಲ್ಲಿ ಸಭೆ ಇನ್ಸ್ಪೆಕ್ಟರ್ ರಾಜೇಶ್ ಹಾಗೂನೆಲ್ಯಾಡಿ ಹೂರಠಾಣೆ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ, ಬಾಲಕೃಷ್ಣ, ಪ್ರತಾಪ್ ರೆಡ್ಡಿ, ನಾಗರಾಜ್ ಪಂಜಳ ಸಮೀಪ ಲಾರಿ ಚಾಲಕ ಅಜಯ್ ನನ್ನು ಬಂಧಿಸಿ ಲಾರಿ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಆಗಿದ್ದು ಚಾಲಕ ಅಜಯ್ ಮೂಲತಃ ಬೆಂಗಳೂರಿನವನಾಗಿದ್ದಾನೆ. ಮೃತ ದೇಹವನ್ನು ಉಪ್ಪಿನಂಗಡಿ ಆಸ್ಪತ್ರೆಯ ಶವಗಾರಕ್ಕೆ ಕಳಿಸಲಾಗಿದೆ.
ಉಡುಪಿ: ವಿದೇಶಿ ಕರೆನ್ಸಿ ವಿನಿಮಯದ ನೆಪದಲ್ಲಿ ಹಲವು ವ್ಯಕ್ತಿಗಳಿಗೆ ವಂಚನೆ ಮಾಡಿದ ಅಂತರರಾಜ್ಯ ಖದೀಮರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಲದ, ಉತ್ತರ ಪ್ರದೇಶದಲ್ಲಿ ನೆಲಿಸಿದ್ದ ಮೊಹಮ್ಮದ್ ಪೋಲಾಶ್ ಖಾನ್ (42), ಮುಂಬೈ ಮೂಲದ, ಮಹಮ್ಮದ್ ಮಹತಾಬ್ ಬಿಲ್ಲಾಲ್ ಶೇಕ್ (43), ಪಶ್ಚಿಮ ಬಂಗಾಳದ ಮಹಮ್ಮದ್ ಫಿರೋಜ್ (30), ದೆಹಲಿಯಲ್ಲಿ ವಾಸವಾಗಿರುವ ನೂರ್ ಮಹಮ್ಮದ್ (36) ಹರಿಯಾಣದ ಮೀರಜ್ ಮತ್ತು ದೆಹಲಿ ಮೂಲದ ಮೊಹಮ್ಮದ್ ಜಹಾಂಗೀರಾ (60) ಎಂದು ಗುರುತಿಸಲಾಗಿದೆ. ಆರೋಪಿಗಳು ಕರೆನ್ಸಿ ವಿನಿಮಯದಲ್ಲಿ ಕಡಿಮೆ ಬೆಲೆಗೆ ಯುಎಇ ದಿರ್ಹಾಮ್ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಗಳ ವಿರುದ್ಧ ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ವಂಚನೆಗೆ ಒಳಗಾದವರು ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಭೇದಿಸಲು ಉಡುಪಿ ಎಸ್ಪಿ ಅಕ್ಷಯ ಎಂ.ಹೆಚ್ ವಿಶೇಷ ತಂಡ ರಚಿಸಿದ್ದರು. ಆರೋಪಿಗಳು ಕಡಿಮೆ ದರದಲ್ಲಿ ಭಾರತೀಯ ಕರೆನ್ಸಿಗೆ ಬದಲಾಗಿ ಯುಎಇ ದಿರ್ಹಾಮ್‌ಗಳನ್ನು ನೀಡುವ ಮೂಲಕ ಸಂತ್ರಸ್ತರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ, ಸಂತ್ರಸ್ತರಿಗೆ ತಮ್ಮ ಬಳಿ ಹೆಚ್ಚು…
ಕೊಣಾಜೆ : ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿ ದಿ. ಅಬ್ದುಲ್ ಖಾದ್ರಿ ಅವರ ಪತ್ನಿ ನೆಬಿಸಾ ಎಂಬವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಹಂಚಿನ ಮನೆಯು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ರವಿವಾರ ರಾತ್ರಿ ಸಂಭವಿಸಿದೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಪ್ರಾಣ ಹಾನಿಯಾಗಿಲ್ಲ, ಆದರೆ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು, ಮಕ್ಕಳ ಶಾಲಾ ಪಠ್ಯ ಪುಸ್ತಕ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮಗೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಶಾಸಕ ಯು ಟಿ ಖಾದರ್ ಭೇಟಿ ನೀಡಿದ್ದು, ಅದೇ ರೀತಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳಾದ ರೆಹನಾ ನಝೀರ್, ಅನೀಸ್, ಹನೀಫ್, ರೆಹನಾ ಮುಹಮ್ಮದ್, ಅಬ್ದುಲ್ ಬಶೀರ್ ಎಸ್ .ಎಂ. ಮತ್ತಿತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿ, ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ…
ಮಂಗಳೂರು ನಗರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್‌ದೀಪ್ ಆರ್ ಜೈನ್ ನೇತೃತ್ವದಲ್ಲಿ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ 150 ಕ್ಕೂ ಅಧಿಕ ಪೊಲೀಸರು ದಾಳಿ ನಡೆಸಿದ್ದಾರೆ. ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ 5 ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ನಿನ್ನೆ ಮುಂಜಾನೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ 60 ಮಂದಿಯ ಮನೆಗೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ, ಡಿಸಿಪಿ ಅಂಶುಕುಮಾರ್ ಸಹಿತ ಹಿರಿಯ ಅಧಿಕಾರಿಗಳು ತಪಾಸಣೆ ಮಾಡಿದರು.
ವಿಟ್ಲ: ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಟ್ಲಮುಡ್ನೂರು ಗ್ರಾಮದ ಏಲ್ಕಾಜೆ ಎಂಬಲ್ಲಿ ನಡೆದಿದೆ. ಯಮುನಾ ಆತ್ಮಹತ್ಯೆ ಮಾಡಿಕೊಂಡವರು. ಈ ಬಗ್ಗೆ ಅವರ ಪುತ್ರ ಉಮೇಶ್ ಪೂಜಾರಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ತಾಯಿಗೆ ಸಕ್ಕರೆ ಕಾಯಿಲೆ, ರಕ್ತದ ಒತ್ತಡವಿದ್ದು, ಔಷಧ ತೆಗೆದುಕೊಂಡರೂ ಗುಣವಾಗದ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ಮನೆಯ ಊಟದ ಕೋಣೆಯ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ : ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಶೇಖರ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ದೂರಿನಲ್ಲಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅವರು ಪತ್ರಿಕೆಗೆ ಹಣ ಕೊಟ್ಟು ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆ ಎಂದು ಬಿಂಬಿಸಿ ಜಾಹೀರಾತು ನೀಡಿದ್ದಾರೆ. ಹಾಗೂ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ.30 ರಂದು ಬಲಿಂಜೆ ಎಂಬಲ್ಲಿ ಸಭಾ ಕಾರ್ಯಕ್ರಮ ನಡೆಸಿ ಬಳಿಕ ಜನರಿಗೆ ಊಟೋಪಚಾರ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.ಈ ಎರಡು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ದೂರು ದಾಖಲು ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ.
ಮುಂಬೈ: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟಿದ್ದು, ಆತನ ಪತ್ನಿಯು ಮರುಮದುವೆಯಾಗಿರುವ ವಿಷಯವು ಮೋಟಾರು ವಾಹನ ಕಾಯ್ದೆಯಡಿ ಆಕೆಗೆ ಪರಿಹಾರ ನಿರಾಕರಣೆಗೆ ಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2010ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪತ್ನಿಗೆ ಪರಿಹಾರ ನೀಡುವಂತೆ ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಪ್ಕೊ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾ. ಎಸ್.ಜಿ.ಡಿಗೆ ನೇತೃತ್ವದ ಏಕಸದಸ್ಯ ನ್ಯಾಯಪೀಠ ಮಾ.3ರಂದು ಅರ್ಜಿಯ ವಿಚಾರಣೆ ನಡೆಸಿದ್ದು, ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ. ಪತಿಯ ಸಾವಿಗೆ ಪರಿಹಾರ ಪಡೆಯಲು ಆತನ ಪತ್ನಿಯು ಜೀವನಪರ್ಯಂತ ಅಥವಾ ಪರಿಹಾರ ಪಡೆಯುವವರೆಗೆ ವಿಧವೆಯಾಗಿ ಉಳಿಯಬೇಕು ಎಂಬುದನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ರಸ್ತೆ ಅಪಘಾತವಾದಾಗ ಮೃತರ ಪತ್ನಿಯು 19 ವರ್ಷ ವಯಸ್ಸಿನವರಾಗಿದ್ದರು.
ಉಳ್ಳಾಲ: ಕೇರಳದಿಂದ ದಾಖಲೆಗಳಿಲ್ಲದೆ ಹಣ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆಹಿಡಿದ ಉಳ್ಳಾಲ ಪೊಲೀಸರು 7.95 ಲಕ್ಷ ನಗದು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಕುತ್ರಿಕ್ಕೋಡು ನಿವಾಸಿ ಸುರೇಶ್ ಎಂಬವರಲ್ಲಿದ್ದ ದಾಖಲೆ ರಹಿತ ಹಣವನ್ನು ಇಂದು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿ ವಾಹನ ತಪಾಸಣೆಗೈಯ್ಯುತ್ತಿದ್ದಾಗ ನಗದು ಪತ್ತೆಯಾಗಿದೆ. ಚುನಾವಣಾ ಆಯೋಗದ ರಿಟೈನಿಂಗ್ ಅಧಿಕಾರಿಗಳಿಗೆ ನಗದು ಹಾಗೂ ಕಾರನ್ನು ವಿಚಾರಣೆಗೆ ನೀಡಲಾಗಿದೆ. ಸುರೇಶ್ ಅವರು ಫ್ಯಾಬ್ರಿಕೇಷನ್ ವೃತ್ತಿ ನಡೆಸುವವರಾಗಿದ್ದು, ಮಂಗಳೂರಿನ ಬಂದರಿನಿಂದ ಸಾಮಗ್ರಿಗಳ ಖರೀದಿಗಾಗಿ ಹಣ ತರುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಹಣವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.










