ಮಂಗಳೂರು : ಪ್ಲ್ಯಾಟ್ ಕೊಡಿಸುತ್ತೇನೆಂದು 60ಲಕ್ಷ ರೂ. ವಂಚನೆಗೈದ ಬಿಲ್ಡರ್ ಸೇರಿದಂತೆ ಮೂವರಿಗೆ ಎರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 5ಸಾವಿರ ದಂಡ ವಿಧಿಸಿ ದ.ಕ.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಂಗಳೂರಿನ ಎಂ.ಕೆ. ಬಿಲ್ಡರ್ ಪಾಲುದಾರ ಕೃಷ್ಣರಾಜ ಮಯ್ಯ(49), ಕದ್ರಿ ಕಂಬಳ ಕ್ರಾಸ್ ರಸ್ತೆ ನಿವಾಸಿಗಳಾದ ರಾಮಚಂದ್ರ ಕೆ.ಎಸ್.(71), ಮಯೂರ್ ಆರ್.ಎಸ್.(34) ಶಿಕ್ಷೆಗೊಳಗಾದವರು. ಆರೋಪಿಗಳು ಪ್ಲ್ಯಾಟ್ ಕೊಡಿಸುತ್ತೇವೆ ಎಂದು ನಂಬಿಸಿ 79ವರ್ಷದ ಪದ್ಮನಾಭ ರಾವ್ ಎಂಬವರಿಂದ 60ಲಕ್ಷ ರೂ. ಪಡೆದು ಫ್ಲ್ಯಾಟ್ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಸಂತ್ರಸ್ತ ಪದ್ಮನಾಭ ರಾವ್ ಅವರು ದ.ಕ.ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ. ದೂರನ್ನು ಪರಿಶೀಲಿಸಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 2023ರ ಮಾರ್ಚ್ 31ರೊಳಗಾಗಿ ವಂಚನೆಗೈದ 60 ಲಕ್ಷ ರೂ. ಹಣವನ್ನು ದೂರುದಾರರಿಗೆ ವಾಪಸ್ ನೀಡಬೇಕೆಂದು ಆದೇಶಿಸಿತ್ತು. ಆದರೂ ಆರೋಪಿಗಳು ಪರಿಹಾರದ ಹಣ ನೀಡದಿದ್ದಾಗ ಅರ್ಜಿದಾರರು ಮತ್ತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ. ದೂರನ್ನು ಪರಿಶೀಲಿಸಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮೂವರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ.