ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನೊಬ್ಬ 9 ತಿಂಗಳ ನಂತರ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸುರೇಶ್ ನಾವೂರು ಮತ್ತು ರೈಲ್ವೆ ಪೊಲೀಸರ ನಿರಂತರ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ.ಕೆಲವು ತಿಂಗಳ ಹಿಂದೆ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ವಿಶ್ರಾಂ ದೇಸಾಯಿ ಅವರು, ಪ್ಲಾಟ್‌ಫಾರ್ಮ್‌ನಲ್ಲಿ ಅಲೆದಾಡುತ್ತಿದ್ದ ಯುವಕನನ್ನು ಗಮನಿಸಿದರು. ಆತ ಮಾನಸಿಕ ಅಸ್ವಸ್ಥನಾಗಿರುವುದನ್ನು ಅರಿತ ಅವರು, ತಕ್ಷಣವೇ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯ ಪಡೆದರು. ಬಳಿಕ ಆತನನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ವಾಸುದೇವ ಅವರ ವಿಶೇಷ ಕಾಳಜಿ ಮತ್ತು ಚಿಕಿತ್ಸೆಯಿಂದ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು. ಗುಣಮುಖನಾಗುತ್ತಿದ್ದಂತೆಯೇ, ಆತ ತನ್ನ ಹೆಸರು ದಿಲೀಪ್ ಎಂದು ಮತ್ತು ತಾನು ಆಂಧ್ರಪ್ರದೇಶದವನು ಎಂದು ತಿಳಿಸಿದನು. ಈ ಸುಳಿವಿನ ಆಧಾರದ ಮೇಲೆ, ನಿತ್ಯಾನಂದ ಒಳಕಾಡು ಮತ್ತು ಸುರೇಶ್ ನಾವೂರು ಅವರು ಆತನ ಕುಟುಂಬವನ್ನು ಪತ್ತೆಹಚ್ಚುವ ಕಾರ್ಯಕ್ಕೆ ಕೈಜೋಡಿಸಿ, ಯಶಸ್ವಿಯಾಗಿ ಕುಟುಂಬದವರನ್ನು ಸಂಪರ್ಕಿಸಿದರು.ದಿಲೀಪ್ 9 ತಿಂಗಳ ಹಿಂದೆಯೇ ಕಾಣೆಯಾಗಿದ್ದು, ಪೋಷಕರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆತನ ತಾಯಿ ಮತ್ತು ಸಹೋದರ ಉಡುಪಿಗೆ ಆಗಮಿಸಿ, ದಿಲೀಪ್‌ನನ್ನು ಗುರುತಿಸಿ ಸುರಕ್ಷಿತವಾಗಿ ತಮ್ಮ ಊರಿಗೆ ಕರೆದೊಯ್ದರು.ಇನ್ನು ರೈಲ್ವೆ ರಕ್ಷಣಾ ಪಡೆ, ರೈಲ್ವೆ ಪೊಲೀಸರು, ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.




