ಕಾರ್ಕಳ : ಬೆಳ್ಮಣ್ನಲ್ಲಿ ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಶನಿವಾರ (ನ.14) ನಡೆದಿದೆ. ಪಿಲಾರು ಗ್ರಾಮದ ಕುಂಜಿಗುಡ್ಡೆ ನಿವಾಸಿ ತ್ರಿಶಾಂತ್ ಅಲಿಯಾಸ್ ಪುನೀತ್ (19) ಮೃತ ದುರ್ದೈವಿ. ಸ್ಥಳೀಯವಾಗಿ ‘ಡಿಜೆ’ (DJ) ಆಗಿ ಗುರುತಿಸಿಕೊಂಡಿದ್ದ ಪುನೀತ್, ಪ್ರತಿಭಾನ್ವಿತ ಯುವಕನಾಗಿದ್ದರು.
ಪುನೀತ್ ಅವರು ಬೆಳ್ಮಣ್ನಿಂದ ಪಿಲಾರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಬೆಳ್ಮಣ್ ಸೊಸೈಟಿ ಮುಂಭಾಗದ ರಸ್ತೆಯಲ್ಲಿ ತಿರುವು ಪಡೆಯಲು ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಮುಂಭಾಗಕ್ಕೆ ಬೈಕ್ ರಭಸವಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಢಿಕ್ಕಿಯ ತೀವ್ರತೆಗೆ ಪುನೀತ್ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆ ಟಿಪ್ಪರ್ನ ಮುಂಭಾಗಕ್ಕೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




