ಉಡುಪಿ: ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ ಐವರು ಅಪ್ರಾಪ್ತ ಬಾಲಕರನ್ನು ಟಿಟಿಇ ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿದೆ.
ಟಿಟಿಇ ಸಬಿತಾ ಶೆಟ್ಟಿ ಅವರು ಟಿಕೆಟ್ ತಪಾಸಣೆ ವೇಳೆ ಬಾಲಕರ ವರ್ತನೆ ಅನುಮಾನಾಸ್ಪದವಾಗಿರುವುದನ್ನು ಗಮನಿಸಿ ತಕ್ಷಣ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮಕ್ಕಳು ಮನೆಯಿಂದ ಓಡಿ ಬಂದಿರುವುದು ಬೆಳಕಿಗೆ ಬಂದಿದೆ. ರಕ್ಷಿಸಲಾದ ಬಾಲಕರಿಗೆ ಅಗತ್ಯ ಉಪಾಹಾರ ಹಾಗೂ ಆರೈಕೆ ಒದಗಿಸಿದ ಬಳಿಕ ಅವರನ್ನು ಉಡುಪಿಯ ಮಕ್ಕಳ ಸಹಾಯ ಕೇಂದ್ರದ ವಶಕ್ಕೆ ಒಪ್ಪಿಸಲಾಯಿತು. ನಂತರ ಬೆಂಗಳೂರು ಆರ್.ಟಿ. ನಗರ ನಿವಾಸಿಗಳಾದ ಈ ಬಾಲಕರಿಗೆ ದೊಡ್ಡಣಗುಡ್ಡೆಯ ಬಾಲಕರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿ, ಪೋಷಕರಿಗೆ ಮಾಹಿತಿ ನೀಡಲಾಯಿತು.
ಗುರುವಾರ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಪೋಷಕರು ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಬಾಲಕರನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಟಿಟಿಇ ಸಬಿತಾ ಶೆಟ್ಟಿ ಹಾಗೂ ಆರ್‌ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದ ಐವರು ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.




