ಬೆಂಗಳೂರು: ನಗರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ವೊಬ್ಬರ ಮೇಲೆಯೇ ದರೋಡೆ ಆರೋಪ ಕೇಳಿಬಂದಿದೆ. ಖಾಸಗಿ ಹೋಟೆಲ್ಗೆ ನುಗ್ಗಿ 20 ಲಕ್ಷ ಹಣ ಕಸಿದು ಪೊಲೀಸ್ ಜೀಪ್ ಸಮೇತ ಎಸ್ಕೇಪ್ ಆಗಿದ್ದಾರೆ ಎಂದು ಆರೋಪ ಹೊರಿಸಲಾಗಿದೆ.ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿಯ ಖಾಸಗಿ ಹೋಟೆಲ್ನಲ್ಲಿ ಇಂಥದೊಂದು ಘಟನೆ ನಡೆದಿದೆ. ಕೇರಳದ ಯುವಕರು ಸಾಕಷ್ಟು ಹಣದೊಂದಿಗೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್ಗೆ ಬಂದಿದ್ದರು. ವಿಚಾರ ತಿಳಿದ ಸಿಐಡಿ ಇನ್ಸ್ಪೆಕ್ಟರ್ವೊಬ್ಬರು, ತನ್ನ ಪೊಲೀಸ್ ಜೀಪ್ನಲ್ಲೇ ಕೆಲ ಯುವಕರ ಜೊತೆಗೆ ಅಲ್ಲಿಗೆ ಹೋಗಿದ್ದರು.ಇನ್ಸ್ಪೆಕ್ಟರ್ ಸೂಚನೆಯಂತೆ ಕುಪೇಂದ್ರ, ಎಂಬವರು ಹೋಟೆಲ್ ರೂಮ್ಗೆ ನುಗ್ಗಿದ್ದಾರೆ. ನಾವು ಪೊಲೀಸರು, ನೀವು ಮನಿ ಟ್ರೇಡಿಂಗ್ ಕಳ್ಳದಂಧೆ ಮಾಡ್ತಿದ್ದೀರಾ ಎಂದು ಹೆದರಿಸಿ, ಐಡಿ ಕಾರ್ಡ್ ತೋರಿಸಿ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ನಿಮ್ಮನ್ನು ಸುಮ್ಮನೆ ಬಿಡಬೇಕು ಅಂದ್ರೆ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.ಯುವಕರು ಹಣ ನೀಡಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿ ಬರೋಬ್ಬರಿ 20 ಲಕ್ಷ ರೂಪಾಯಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.




